ಗೋವಾ ಮಾಜಿ ಸಚಿವ ಬಿಜೆಪಿಗೆ ಸೇರ್ಪಡೆಗೆ ಸಜ್ಜು
ಪಣಜಿ, ಡಿಸೆಂಬರ್, 16: ಗೋವಾದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಡುವೆ ಗೋವಾದಲ್ಲಿ ಹಲವಾರು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ. ಮಾಜಿ ಗೋವಾ ಸಚಿವ ರೋಹನ್ ಖೌಂಟೆ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರ್ಪಡೆ ಆಗುವುದನ್ನು ಖಚಿತ ಪಡಿಸಿದ್ದಾರೆ.
ಪೂರ್ವೊರಿಮ್ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಶಾಸಕ ರೋಹನ್ ಖೌಂಟೆ, ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ರೋಹನ್ ಖೌಂಟೆ, "ನಾನು ಬಿಜೆಪಿಗೆ ಸೇರ್ಪಡೆಯಾಗುವ ನಿರ್ಧಾರವನ್ನು ಮಾಡಿದ್ದೇನೆ. ಪೂರ್ವೊರಿಮ್ ವಿಧಾನಸಭಾ ಕ್ಷೇತ್ರದ ಬೆಳವಣಿಗೆಯ ದೃಷ್ಟಿಯಿಂದ ಹಾಗೂ ಸೌಹಾರ್ದ ಸಂಸ್ಕೃತಿಯ ಹಿತಾದೃಷ್ಟಿಯಿಂದ ನಾನು ಬಿಜೆಪಿಗೆ ಸೇರ್ಪಡೆ ಆಗುವ ನಿರ್ಧಾರವನ್ನು ಮಾಡಿಕೊಂಡಿದ್ದೇನೆ," ಎಂದು ತಿಳಿಸಿದ್ದಾರೆ.
ಹಾಗೆಯೇ ತಾನು ಬಿಜೆಪಿಗೆ ಸೇರ್ಪಡೆ ಆಗುವ ದಿನಾಂಕವನ್ನು ಕೂಡಾ ತಿಳಿಸಿದ್ದಾರೆ. "ನಾನು ಶುಕ್ರವಾರ ಪಣಜಿಯ ಮಹಾಲಕ್ಷ್ಮಿ ದೇವಾಲಯದಲ್ಲಿ ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಪಕ್ಷವನ್ನು ಸೇರ್ಪಡೆ ಆಗಲಿದ್ದೇನೆ," ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ತನ್ನ ಶಾಸಕ ಸ್ಥಾನಕ್ಕೆ ಮಾಜಿ ಸಚಿವ ರೋಹನ್ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ರೋಹನ್ ಬಿಜೆಪಿಗೆ ಸೇರ್ಪಡೆ ಆಗುವ ಬಗ್ಗೆ ವರದಿ ಆಗಿದ್ದವು. ಇನ್ನು ಶಾಸಕರ ರಾಜೀನಾಮೆಯ ಬಳಿಕ ಗೋವಾ ಶಾಸಕರ ಸಂಖ್ಯೆಯು 36 ಕ್ಕೆ ಇಳಿಕೆ ಆಗಿದೆ.

"ನಾನು ಇಂದು ಗೋವಾ ವಿಧಾನಸಭೆ ಸ್ಪೀಕರ್ ರಾಜೇಶ್ ಪಟ್ನಾಕರ್‌ರನ್ನು ಭೇಟಿಯಾದೆ. ಗೋವಾ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ಗೋವಾದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ರಾಜಕೀಯವಾಗಿ ಹಲವಾರು ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಇದನ್ನು ನಾವು ಸರಿಯಾಗಿ ಗಮನಿಸಬಹುದು," ಎಂದು ತನ್ನ ರಾಜೀನಾಮೆಯ ಬಳಿಕ ರೋಹನ್ ಖೌಂಟೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ರಾಷ್ಟ್ರ ಹಾಗೂ ಗೋವಾದ ಹಿತಾದೃಷ್ಟಿಗೆ ನನ್ನ ಮುಂದಿನ ನಡೆ"
"ರಾಷ್ಟ್ರ ಹಾಗೂ ಗೋವಾದ ವಿಚಾರದಲ್ಲಿ ಗಂಭೀರವಾಗಿ ಆಲೋಚನೆ ಮಾಡಿ ನಾನು ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದ್ದೇನೆ. ಅದರಲ್ಲಿ ಮೊದಲ ಭಾಗ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಆಗಿದೆ. ಗೋವಾದ ಜನರನ್ನು ಆಟಿಕೆಯಂತೆ ಕಾಣುವವರ ಜೊತೆಯಾಗಲು ನಾನು ಬಯಸಲ್ಲ," ಎಂದು ಕೂಡಾ ರೋಹನ್ ಖೌಂಟೆ ತಿಳಿಸಿದ್ದರು.
ಈ ವೇಳೆಯಲ್ಲಿ ಮಾಧ್ಯಮಗಳು ಬಿಜೆಪಿ ಸೇರ್ಪಡೆ ಆಗುವ ಸಾಧ್ಯತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರೋಹನ್ ಖೌಂಟೆ, "ಇನ್ನು ಎರಡು ದಿನದಲ್ಲಿ ನನ್ನ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ನಾನು ಯಾವುದೇ ಪಕ್ಷವನ್ನು ಸೇರುವ ಬಗ್ಗೆ ಈವರೆಗೂ ನಿರ್ಧಾರವನ್ನು ಕೈಗೊಂಡಿಲ್ಲ. ಇನ್ನು ಕೆಲವು ದಿನದಲ್ಲೇ ಯಾವುದೇ ಪಕ್ಷವನ್ನು ಸೇರಬೇಕೆ ಅಥವಾ ಸೇರಬಾರದೆ, ಯಾವ ಪಕ್ಷಕ್ಕೆ ಸೇರ್ಪಡೆ ಆಗುವುದು ಎಂಬ ಬಗ್ಗೆ ನಿರ್ಧಾರವನ್ನು ಕೈಗೊಳ್ಳುತ್ತೇನೆ," ಎಂದು ತಿಳಿಸಿದ್ದಾರೆ.
"ನಾನು ನನ್ನ ಸಹಾಯಕ ಸಮಿತಿಯ ಜೊತೆ ಸಭಯನ್ನು ನಡೆಸುತ್ತೇನೆ. ಚರ್ಚೆ ನಡೆಸಿ ನಾನು ಯಾವುದೇ ನಿರ್ಧಾರವನ್ನು ಕೈಗೊಳ್ಳುತ್ತೇನೆ. ನಾನು ಇಂದು ಸಂಜೆ ಒಂದು ಸಭೆಯನ್ನು ಸೇರುತ್ತೇನೆ," ಎಂದು ನಿನ್ನೆಯಷ್ಟೇ ಹೇಳಿದ್ದ ರೋಹನ್ ಖೌಂಟೆ ಇಂದು ಬಿಜೆಪಿಗೆ ಸೇರ್ಪಡೆ ಆಗುವುದುನ್ನು ಖಚಿತ ಪಡಿಸಿದ್ದಾರೆ.
ಕಾಂಗ್ರೆಸ್ ಬಗ್ಗೆ ರೋಹನ್ ಖೌಂಟೆ ಹೇಳುವುದು ಏನು?
ತನ್ನ ವಿಧಾನಸಭಾ ಕ್ಷೇತ್ರ ಪೂರ್ವೊರಿಮ್‌ನಲ್ಲಿ ಕಾಂಗ್ರೆಸ್‌ಗೆ ಯಾವುದೇ ಸ್ಥಾನಮಾನವಿಲ್ಲ ಎಂದು ಹೇಳಿರುವ ರೋಹನ್ ಖೌಂಟೆ, ಎಲ್ಲಾ ಪಕ್ಷಗಳು ಅಭಿವೃದ್ಧಿ ಆಗುತ್ತಿದೆ, ಆದರೆ ಕಾಂಗ್ರೆಸ್ ಮಾತ್ರ ಹಾಗೆಯೇ ಇದೆ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಬೆಂಬಲಿಗರು ತಮ್ಮ ಸಹನೆಯನ್ನೇ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ವಿಚಾರದಲ್ಲಿ ಗೊಂದಲಗಳು ಇದೆ. ಪೂರ್ವೊರಿಮ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡುವ ವಿಚಾರದಲ್ಲೇ ಕಾಂಗ್ರೆಸ್‌ಗೆ ಹಲವಾರು ಗೊಂದಲಗಳು ಇದೆ. ಕಾಂಗ್ರೆಸ್ ಮುಂದಿನ ವಿಧಾನಸಭೆ ಚುನಾವಣೆಗೂ ಮುನ್ನ ತನ್ನ ಪ್ರಮುಖ ಸ್ಥಾನಗಳಿಗೆ ಉತ್ತಮ ನಾಯಕರನ್ನು ನೇಮಕ ಮಾಡುವ ಬದಲಾಗಿ ಪತ್ರಿಕಾಗೋಷ್ಠಿ ಹಾಗೂ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ," ಎಂದು ಟೀಕೆ ಮಾಡಿದ್ದಾರೆ.












Click it and Unblock the Notifications