ಅವಳಿ ಕಟ್ಟಡ ಭ್ರಷ್ಟಾಚಾರ ಮುಚ್ಚಿಹಾಕಲು ಬಿಜೆಪಿ ದೇಣಿಗೆ ಪಡೆದಿದೆ: ಆರ್‌ಜೆಡಿ ಆರೋಪ
ಲಕ್ನೋ, ಆಗಸ್ಟ್ 29: ದೇಶದಲ್ಲಿ ಇದೇ ಮೊದಲ ಬಾರಿಗೆ 100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ ನೆಲಸಮ ಮಾಡಲಾಗಿದೆ. ಈ ಕಟ್ಟಡಗಳ ನಿರ್ಮಾಣದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎನ್ನುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನೀಡಿದ ಆದೇಶದನ್ವಯ ಅವಳಿ ಕಟ್ಟಡಗಳನ್ನು ನೆಲಕ್ಕುರುಲಿಸಲಾಗಿದೆ.
ಸೂಪರ್ ಟೆಕ್ ಅವಳಿ ಗೋಪುರ ಧ್ವಂಸಗೊಳಿಸಿದ ಬೆನ್ನಲ್ಲೇ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದೆ. 'ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಸೂಪರ್‌ಟೆಕ್ ಲಿಮಿಟೆಡ್‌ನಿಂದ ದೇಣಿಗೆ ಪಡೆದಿದ್ದಾರೆ' ಎಂದು ಆರ್ ಜೆಡಿ ಬಿಜೆಪಿ ವಿರುದ್ಧ ಆರೋಪಿಸಿದೆ.
ಸೂಪರ್‌ಟೆಕ್ ಲಿಮಿಟೆಡ್‌ನಿಂದ ಬಿಜೆಪಿ ಸ್ವೀಕರಿಸಿದ ದೇಣಿಗೆಗಳ ಪುರಾವೆಗಳನ್ನು ನೀಡಿರುವ ಆರ್‌ಜೆಡಿ, "ಭ್ರಷ್ಟಾಚಾರದ ಕಾರಣ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಆದೇಶದನ್ವಯ ಈ ರೀತಿಯ ಬಹುಮಹಡಿ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಬಿಜೆಪಿ ಈ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಸೂಪರ್‌ಟೆಕ್ ಲಿಮಿಟೆಡ್‌ನಿಂದ ದೇಣಿಗೆ ಪಡೆಯುವುದನ್ನು ಮುಂದುವರೆಸಿದೆ! ಸಿಬಿಐ/ಇಡಿ ಈ ಬಗ್ಗೆ ತನಿಖೆ ನಡೆಸುತ್ತದೆಯೇ? ಬಿಜೆಪಿ ನಾಯಕರಿಗೆ ಉತ್ತರಿಸುವ ಧೈರ್ಯವಿದೆಯೇ?" ಎಂದು ಅದು ಪ್ರಶ್ನೆ ಮಾಡಿದೆ.

ಎಸ್‌ಪಿ ವಿರುದ್ಧ ಬಿಜೆಪಿ ಆರೋಪ
ನೋಯ್ಡಾ ಅವಳಿ ಕಟ್ಟಡ ನೆಲಸಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಜನತಾ ಪಕ್ಷ ಕಟ್ಟಡ ನಿರ್ಮಾಣದ ವೇಳೆ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.
ಬಿಜೆಪಿ ನಾಯಕ ಭೂಪೇಂದ್ರ ಚೌಧರಿ "ಅಖಿಲೇಶ್ ಯಾದವ್ ಮತ್ತು ಆ ಕಾಲದ ಪ್ರತಿಯೊಂದು ಅಧಿಕಾರಿಗಳು ಈ ಕಟ್ಟಡದ ಅಕ್ರಮ ನಿರ್ಮಾಣದ ಬಗ್ಗೆ ಉತ್ತರಿಸಬೇಕು ಮತ್ತು ಈ ಎಲ್ಲಾ ಅಕ್ರಮ ನಿರ್ಮಾಣಗಳು ಅಂದಿನ ಸರ್ಕಾರದ ರಕ್ಷಣೆಯಲ್ಲಿ ನಡೆದಿವೆ ಎಂದು ನನಗೆ ಖಾತ್ರಿಯಿದೆ" ಎಂದು ಆರೋಪಿಸಿದ್ದರೆ.b

ಕಟ್ಟಡ ಧ್ವಂಸ ಒಂದು ಪಾಠವಾಗಲಿ
" ಅಕ್ರಮ ಆಸ್ತಿ ಸಂಪಾದನೆ ಮತ್ತು ಈ ರೀತಿ ಕಾನೂನು ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುವವರಿಗೆ ಧ್ವಂಸ ಕ್ರಿಯೆಯು ಒಂದು ಉತ್ತಮ ಸಂದೇಶವಾಗಿದೆ ಮತ್ತು ನಾವೆಲ್ಲರೂ ಇದರಿಂದ ಪಾಠಗಳನ್ನು ಕಲಿಯಬೇಕು" ಎಂದು ಬಿಜೆಪಿ ನಾಯಕ ಚೌಧರಿ ಹೇಳಿದರು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಅಂತಹ ಎಲ್ಲಾ ಅಕ್ರಮ ಆಸ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು. ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ, ಬುಲ್ಡೋಜರ್ ಕಾರ್ಯಾಚರಣೆ ಮೂಲಕ ಒತ್ತುವರಿಯನ್ನು ತೆರವು ಮಾಡುತ್ತಿದ್ದೇವೆ. ಯಾವುದೇ ಅಕ್ರಮ ಕಾಮಗಾರಿ, ಅತಿಕ್ರಮಣಗಳನ್ನು ಬಿಜೆಪಿ ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದರು.

ಸುದೀರ್ಘ 9 ವರ್ಷಗಳ ಹೋರಾಟ
ನೋಯ್ಡಾ ಸೂಪರ್ ಟೆಕ್ ಟವರ್ ಎಂದೇ ಹೆಸರಾಗಿದ್ದ 40 ಅಂತಸ್ತಿನ ಎರಡು ಕಟ್ಟಡಗಳನ್ನು ನಿಯಮಬಾಹಿರವಾಗಿ ನಿರ್ಮಿಸಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಬರೋಬ್ಬರಿ 9 ವರ್ಷಗಳ ಕಾನೂನು ಹೋರಾಟದ ನಂತರ ಸುಪ್ರೀಂಕೋರ್ಟ್ ಕಟ್ಟಡ ನಿರ್ಮಾಣದಲ್ಲಿ ಅಕ್ರಮ ಕಂಡುಬಂದಿದೆ ಎಂದು ಹೇಳಿ ಕಟ್ಟಡ ಧ್ವಂಸಗೊಳಿಸಲು ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಆಗಸ್ಟ್ 28ರಂದು ಮಧ್ಯಾಹ್ನ ಎರಡು ಕಟ್ಟಡಗಳನ್ನು ಸ್ಫೋಟಕ ಬಳಸಿ ಕೆಡವಲಾಗಿದೆ.

ಕಟ್ಟಡ ಧ್ವಂಸಗೊಳಸಿದ್ದರ ಬಗ್ಗೆ ಪರ-ವಿರೋಧ ಚರ್ಚೆ
ಇನ್ನು ಬೃಹತ್ ಕಟ್ಟಡಗಳನ್ನು ಧ್ವಂಸಗೊಳಿಸಿದ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಯಿತು. ಕಟ್ಟಡ ಧ್ವಂಸಗೊಳಿಸುವ ವಿಡಿಯೋ ಭಾರಿ ವೈರಲ್ ಆಗಿದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವವರಿಗೆ ಇದೊಂದು ಪಾಠವಾಗಲಿ ಎಂದು ಕೆಲವರು ಹೇಳಿದರೆ.
ಮತ್ತೆ ಕೆಲವು ಮಂದಿ ಈ ಕಟ್ಟಡವನ್ನು ಕೆಡವುವ ಬದಲು ಯಾವುದಾದರು ಉದ್ದೇಶಕ್ಕೆ ಸರ್ಕಾರವೇ ಬಳಸಿಕೊಳ್ಳಬಹುದಿತ್ತು. ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಕೆಡವಲು ಮತ್ತೆ ಹಣ ಖರ್ಚು ಮಾಡಿದ್ದು ವ್ಯರ್ಥ ಎಂದು ವಾದಿಸಿದ್ದಾರೆ.












Click it and Unblock the Notifications