ಪಾತಕಿ ಅಬು ಸಲೇಂ ಹಣವನ್ನು ಹೂಡಿಕೆ ಮಾಡಿದ್ದ ವ್ಯಕ್ತಿಯ ಬಂಧನ
ನೊಯ್ಡಾ, ಜುಲೈ 16: ಕುಖ್ಯಾತ ಪಾತಕಿ ಅಬು ಸಲೇಂನ ಅಕ್ರಮ ಆಸ್ತಿಗಳ ವಹಿವಾಟು ನೋಡುಕೊಳ್ಳುತ್ತಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಸ್ಪೆಷಲ್ ಟಾಸ್ಟ್ ಫೋರ್ಸ್ ಬಂಧಿಸಿದೆ.
Recommended Video
ಅಬು ಸಲೇಂ ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದ ಅಪರಾಧಿಯಾಗಿದ್ದ. ಬಂಧಿತನನ್ನು ಗಜೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ಕುಖ್ಯಾತ ಗ್ಯಾಂಗ್ಸ್ಟರ್ ಖಾನ್ ಮುಬಾರಕ್ನ ಆಪ್ತ ಕೂಡ ಆಗಿದ್ದ. ಗಜೇಂದ್ರ ಸಿಂಗ್ನ್ನು ಎಸ್ಟಿಎಫ್ ತಂಡ ಮುಂಬೈನಲ್ಲಿ ಬುಧವಾರ ತಡರಾತ್ರಿ ಬಂಧಿಸಿದೆ.
ಈತ ದೆಹಲಿಯ ಎನ್ಸಿಟಿ ಪ್ರದೇಶದಲ್ಲಿ ಅಬು ಸಲೇಂನ ಅಕ್ರಮ ಆಸ್ತಿಗಳ ವಹಿವಾಟು ನೋಡಿಕೊಳ್ಳುತ್ತಿದ್ದ ಎಂದು ಎಎಸ್ಪಿ ರಾಜಕುಮಾರ್ ಮಿಶ್ರಾ ತಿಳಿಸಿದ್ದಾರೆ.

2014ರಲ್ಲಿ ಈತ ದೆಹಲಿ ಮೂಲ ವ್ಯಾಪಾರಿಯಿಂದ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ವಹಿವಾಟಿನಲ್ಲಿ 1.8 ಕೋಟಿ ರೂಪಾಯಿ ಪಡೆದುಕೊಂಡು ವಂಚಿಸಿದ್ದ. ಹಣ ವಾಪಸ್ ಕೇಳಿದ್ದ ವ್ಯಾಪಾರಿಯ ಮೇಲೆ ನೋಯ್ಡಾದ ಸೆಕ್ಟರ್ 18ರಲ್ಲಿ ಖಾನ್ ಮುಬಾರಕ್ನ ಕಡೆಯವರು ಗುಂಡು ಹಾರಿಸಿದ್ದರು. ಕಾರಿನಲ್ಲಿದ್ದ ವ್ಯಾಪಾರಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಆ ಸಂದರ್ಭದಲ್ಲಿ ಶೂಟರ್ಗಳಿಗೆ ಮಿಶ್ರಾ 10 ಲಕ್ಷ ರೂಪಾಯಿ ಪಾವತಿಸಿದ್ದ. ಹಣದ ವಹಿವಾಟಿನ ರಹಸ್ಯ ತನಿಖಾ ಸಂಸ್ಥೆಗೆ ಗೊತ್ತಾಗಿತ್ತು. ಈ ಜಾಡನ್ನು ಬೆನ್ನತ್ತಿದಾಗ ಗಜೇಂದ್ರ ಸಿಂಗ್ನ ಉಳಿದ ವಿಚಾರಗಳು ಬಹಿರಂಗವಾದವು.
ಆತ ಅಬು ಸಲೇಂ ಮತ್ತು ಖಾನ್ ಮುಬಾರಕ್ ಪರವಾಗಿ ಅವರ ಹಣವನ್ನು ದೆಹಲಿ-ಎನ್ಸಿಆರ್ ಪ್ರದೇಶಗಳಲ್ಲಿ ವಿವಿಧ ಪ್ರಾಪರ್ಟಿಗಳ ಮೇಲೆ ಹೂಡಿಕೆ ಮಾಡಿದ್ದ. ನೊಯ್ಡಾ ಪೊಲೀಸ್ ಠಾಣೆಯಲ್ಲಿ ಸಿಂಗ್ ವಿರುದ್ಧ ಕೆಲವು ಪ್ರಕರಣಗಳು ಬಾಕಿ ಇದ್ದು, ಈಗ ಅವುಗಳ ಮುಂದಿನ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಎಎಸ್ಪಿ ಮಿಶ್ರಾ ತಿಳಿಸಿದ್ದಾರೆ.












Click it and Unblock the Notifications