ಕೊವಿಡ್-19 ಸುನಾಮಿ ಸೃಷ್ಟಿಗೆ ಓಮಿಕ್ರಾನ್ ಮತ್ತು ಡೆಲ್ಟಾ ಕಾರಣ ಎಂಬ ಬಗ್ಗೆ WHO ಕಳವಳ
ನವದೆಹಲಿ, ಡಿಸೆಂಬರ್ 30: ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಗಣನೀಯ ಏರಿಕೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಕೊರೊನಾವೈರಸ್‌ನ ಹೊಸ ರೂಪಾಂತರಿ ಒಮಿಕ್ರಾನ್ ಮತ್ತು ಡೆಲ್ಟಾದಿಂದಾಗಿ "ಸುನಾಮಿ" ರೀತಿಯಲ್ಲಿ ಪ್ರಕರಣಗಳು ಏರಿಕೆ ಆಗುತ್ತಿರುವ ಬಗ್ಗೆ ಚಿಂತೆಯಾಗಿದೆ ಎಂದು ಡಾ ಗೆಬ್ರೆಯೆಸಸ್ ಹೇಳಿದ್ದಾರೆ. WHO ಅಂಕಿ-ಅಂಶಗಳ ಪ್ರಕಾರ, ವಿಶ್ವಾದ್ಯಂತ ದಾಖಲಾದ ಕೋವಿಡ್ -19 ಪ್ರಕರಣಗಳ ಸಂಖ್ಯೆಯು ಹಿಂದಿನ ವಾರಕ್ಕೆ ಹೋಲಿಸಿದರೆ ಡಿಸೆಂಬರ್ 20 ರಿಂದ 26ರ ವಾರದಲ್ಲಿ ಶೇಕಡಾ 11ರಷ್ಟು ಹೆಚ್ಚಾಗಿದೆ.
"ಒಮಿಕ್ರಾನ್, ಡೆಲ್ಟಾದಂತೆಯೇ ಅದೇ ಸಮಯದಲ್ಲಿ ಹೆಚ್ಚಾಗಿ ಹರಡುತ್ತದೆ, ಇದು ಪ್ರಕರಣಗಳ ಗಣನೀಯ ಏರಿಕೆಗೆ ಕಾರಣವಾಗುತ್ತಿದೆ ಎಂಬುದರ ಬಗ್ಗೆ ನಾನು ಹೆಚ್ಚು ಕಾಳಜಿ ವಹಿಸುತ್ತೇನೆ. ಏಕೆಂದರೆ, ಇದು ದಣಿದ ಆರೋಗ್ಯ ಕಾರ್ಯಕರ್ತರು ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲೆ ಹೆಚ್ಚಿನ ಒತ್ತಡವನ್ನು ನೀಡುತ್ತದೆ," ಎಂದು WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಸುಳ್ಳಾದ ವಿಶ್ವ ಆರೋಗ್ಯ ಸಂಸ್ಥೆಯ ಆಶಯ:
ಆರೋಗ್ಯ ವ್ಯವಸ್ಥೆಗಳ ಮೇಲಿನ ಒತ್ತಡದಿಂದ ಹೊಸ ಕೊರೊನಾವೈರಸ್ ರೋಗಿಗಳಿಗೆ ಮಾತ್ರವಲ್ಲ, ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರು ಕೊವಿಡ್‌ನಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 2021ರಲ್ಲಿ ಕೊವಿಡ್ -19 ವಿರುದ್ಧದ ಹೋರಾಟ ಬಹುತೇಕ ಯಶಸ್ವಿಯಾಗಲಿದೆ, ಮುಂದಿನ ವರ್ಷ ಸಾಂಕ್ರಾಮಿಕ ರೋಗದ ತೀವ್ರತೆ ತಗ್ಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಆಶಿಸಿತ್ತು. ಆದರೆ ಅದು ಸುಳ್ಳಾಗಿದೆ.
ಲಸಿಕೆ ವಿತರಣೆಯಲ್ಲಿ ಗುರಿ ತಲುಪದ 94 ರಾಷ್ಟ್ರಗಳು:
WHO ಪ್ರತಿ ದೇಶದಲ್ಲಿ ಶೇಕಡಾ 40ರಷ್ಟು ಜನಸಂಖ್ಯೆಗೆ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಲಸಿಕೆ ಹಾಕಬೇಕೆಂದು ಬಯಸಿದೆ. 2022 ರ ಮಧ್ಯದ ವೇಳೆಗೆ ಶೇಕಡಾ 70ರಷ್ಟು ಮಂದಿಗೆ ಸಂಪೂರ್ಣ ಲಸಿಕೆ ವಿತರಿಸುವು ಗುರಿಯನ್ನು ಹೊಂದಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ 194 ಸದಸ್ಯ ರಾಷ್ಟ್ರಗಳ ಪೈಕಿ 92 ರಾಷ್ಟ್ರಗಳು ಶೇ.40ರಷ್ಟು ಜನರಿಗೆ ಸಂಪೂರ್ಣ ಲಸಿಕೆ ನೀಡುವ ಗುರಿಯನ್ನು ತಲುಪುವಲ್ಲಿ ವಿಫಲವಾಗಿವೆ. "2021 ಕಠಿಣವಾಗಿದ್ದರೂ, 2022ರ ಮಧ್ಯದ ವೇಳೆಗೆ ಶೇಕಡಾ 70ರಷ್ಟು ಜನರಿಗೆ ಲಸಿಕೆ ಹಾಕುವ ಅಭಿಯಾನವನ್ನೇ ಹೊಸ ವರ್ಷದ ನಿರ್ಣಯವನ್ನಾಗಿ ಮಾಡಲು ನಾನು ಪ್ರತಿಯೊಬ್ಬರನ್ನು ಕೇಳುತ್ತೇನೆ," ಎಂದು ಗೆಬ್ರೆಯೆಸಸ್ ಹೇಳಿದ್ದಾರೆ.
ಶ್ರೀಮಂತ ರಾಷ್ಟ್ರಗಳ ವಿರುದ್ಧ ಟೀಕೆ:
ಕೊವಿಡ್ -19 ಅನ್ನು ಎದುರಿಸಲು ನೀಡಿದ ಶಸ್ತ್ರಾಸ್ತ್ರಗಳನ್ನು ಶ್ರೀಮಂತ ರಾಷ್ಟ್ರಗಳು ಗೋಡೆಗೆ ನೇತು ಹಾಕುತ್ತಿವೆ ಎಂದು ಆರೋಪಿಸಿದ ಅವರು, ಆ ರಾಷ್ಟ್ರಗಳಲ್ಲಿನ ವರ್ತನೆಯು ವೈರಸ್‌ಗಾಗಿ ಹಿಂದಿನ ಬಾಗಿಲನ್ನು ತೆರೆದಂತೆ ಗೋಚರಿಸುತ್ತಿದೆ ಎಂದು ಗೆಬ್ರೆಯೆಸಸ್ ಟೀಕಿಸಿದ್ದಾರೆ.
"ಜನಪ್ರಿಯತೆ, ಸಂಕುಚಿತ ರಾಷ್ಟ್ರೀಯತೆ ಮತ್ತು ಮಾಸ್ಕ್, ಥೆರಪ್ಯೂಟಿಕ್ಸ್, ಡಯಾಗ್ನೋಸ್ಟಿಕ್ಸ್ ಮತ್ತು ಲಸಿಕೆಗಳನ್ನು ಒಳಗೊಂಡಂತೆ ಆರೋಗ್ಯ ಸಾಧನಗಳ ಸಂಗ್ರಹಣೆಯು ಕಡಿಮೆಯಾಗಿರುವ ದೇಶಗಳಲ್ಲಿ ಇಕ್ವಿಟಿ ದುರ್ಬಲಗೊಂಡಿದೆ. ಕೊರೊನಾವೈರಸ್ ಹೊಸ ರೂಪಾಂತರಗಳ ಹೊರಹೊಮ್ಮುವಿಕೆಗೆ ಸೂಕ್ತವಾದ ಪರಿಸ್ಥಿತಿಯನ್ನು ಸೃಷ್ಟಿಸಿದೆ" ಎಂದು ಅವರು ದೂಷಿಸಿದ್ದಾರೆ. ಇದರ ಮಧ್ಯೆ 2021ರಲ್ಲಿ ತಪ್ಪು ಮಾಹಿತಿಯು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯತ್ನಕ್ಕೆ ಅಡ್ಡಿಯಾಯಿತು ಎಂದಿದ್ದಾರೆ.
"ಪ್ರಸ್ತುತ ಯುರೋಪ್‌ನಲ್ಲಿ ಮತ್ತು ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಕೊವಿಡ್-19 ದೊಡ್ಡ ಅಲೆ ಕಾಣಿಸಿಕೊಳ್ಳುತ್ತಿದೆ. ಲಸಿಕೆ ಪಡೆದುಕೊಳ್ಳುವುದರ ಕುರಿತಾದ ಹಿಂಜರಿಕೆ ಹಾಗೂ ತಪ್ಪು ಮಾಹಿತಿಯಿಂದಾಗಿ ಅಂದು ಲಸಿಕೆ ಪಡೆದುಕೊಳ್ಳದವರು ಇಂದು ಸಾವಿನ ಮನೆ ಸೇರುವಂತ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದರು.












Click it and Unblock the Notifications