ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪುತ್ರಿಗೆ ವಂಚಿಸಿದ್ದ ಮೂವರ ಬಂಧನ
ನವದೆಹಲಿ,ಫೆಬ್ರವರಿ 15: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿಗೆ ವಂಚಿಸಿದ್ದ ಮೂವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಆನ್ಲೈನ್ ವೆಬ್ಸೈಟ್ ಓಎಲ್‌ಎಕ್ಸ್‌ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಮಾರಲು ಮುಂದಾಗಿದ್ದ ಕೇಜ್ರಿವಾಲ್ ಅವರ ಪುತ್ರಿಗೆ ಆ ಸೋಫಾ ಕೊಳ್ಳುವುದಾಗಿ ನಂಬಿಸಿ ಆಕೆಯ ಬ್ಯಾಂಕ್ ಖಾತೆಗೆ ಸ್ವಲ್ಪ ಹಣವನ್ನು ಹಾಕಿದ್ದ. ನಂತರ ಆಕೆಗೆ ಬಾರ್ ಕೋಡ್ ಕಳುಹಿಸಿ, ಅದನ್ನು ಸ್ಕ್ಯಾನ್ ಮಾಡಲು ಹೇಳಿದ್ದ. ಆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಆಕೆಯ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿತ್ತು.
ಈ ಮೂಲಕ ಸೋಫಾ ಖರೀದಿಸುವ ನೆಪದಲ್ಲಿ ಈ ನಾಲ್ವರು ಅರವಿಂದ್ ಕೇಜ್ರಿವಾಲ್ ಮಗಳಿಗೆ 34,000 ರೂ. ಪಂಗನಾಮ ಹಾಕಿದ್ದರು.ಹರಿಯಾಣದ ನುಹ್ ನಿವಾಸಿ ಸಾಜಿದ್(26), ಮಥುರಾ ಮೂಲದ ಕಪಿಲ್(18) ಮತ್ತು ಮನ್ವಿಂದರ್ ಸಿಂಗ್ (25) ಅವರನ್ನು ಭಾರತಪುರ-ಮಥುರಾ ಗಡಿಯಲ್ಲಿ ತಾಂತ್ರಿಕ ಕಣ್ಗಾವಲು ಸಹಾಯದಿಂದ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಾರಿಸ್(25) ಎಂದು ಗುರುತಿಸಲಾಗಿದ್ದು, ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ಹರ್ಷಿತಾ ನಂಬಿಕೆ ಸಂಪಾದಿಸಲು ಮತ್ತು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸಣ್ಣ ಪ್ರಮಾಣದ ಮೊತ್ತವನ್ನು ಹರ್ಷಿತಾಗೆ ರವಾನಿಸಿದ್ದ.
ಬಳಿಕ ಅವರ ಬ್ಯಾಂಕ್ ಖಾತೆಯಿಂದ 20,000 ರೂ ಮತ್ತು 14,000 ರೂ ಕಂತುಗಳಲ್ಲಿ ಒಟ್ಟು 34,000 ರೂ ಎಗರಿಸಿದ್ದಾನೆ. ಮುಖ್ಯಮಂತ್ರಿ ನಿವಾಸದ ಸಮೀಪದಲ್ಲಿನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದರು.












Click it and Unblock the Notifications