ಇದು ನನ್ನ ಕೊನೆಯ ಭಾಷಣ: ಲೋಸಕಸಭೆಯಲ್ಲಿ ದೇವೇಗೌಡ ಭಾವುಕ
Recommended Video

ನವದೆಹಲಿ, ಫೆಬ್ರವರಿ 08: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಬಗೆಗಿನ ಚರ್ಚೆ ವೇಳೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, ಭಾಷಣದ ವೇಳೆ ಭಾವುಕರಾದರು.
ನಾನು 57 ವರ್ಷಗಳಿಂದ ರಾಜ್ಯ ಮತ್ತು ರಾಷ್ಟ್ರಕಾರಣದಲ್ಲಿದ್ದೇನೆ ಈಗ ಅದಕ್ಕೆ ಅಂತ್ಯ ಬಂದಿದೆ, ಸಂಸತ್ತಿನಲ್ಲಿ ಇದು ನನ್ನ ಕೊನೆಯ ಭಾಷಣ ಎಂದ ದೇವೇಗೌಡರು ಭಾವುಕರಾಗಿಯೇ ಸಂಸತ್ತಿನಲ್ಲಿ ತಮ್ಮ ಹಳೆಯ ದಿನಗಳನ್ನು ನೆನೆದರು.
ತಾವು ಪ್ರಧಾನಿ ಆಗಿದ್ದ ದಿನಗಳು, ಆಗಿನ ತಮ್ಮ ಜೊತೆಗಾರರು, ಅಂದಿನ ರಾಜಕೀಯವನ್ನು ನೆನೆದ ದೇವೇಗೌಡ ಅವರು, ಜ್ಯೋತಿ ಬಸು ಮತ್ತು ವಿಪಿ ಸಿಂಗ್ ಅವರು ಪ್ರಧಾನಿ ಪಟ್ಟ ನಿರಾಕರಿಸಿದ್ದಕ್ಕಾಗಿ ನಾನು ಪ್ರಧಾನಿ ಆಗಬೇಕಾಯಿತು ಎಂದು ಆ ದಿನಗಳನ್ನು ಮೆಲುಕು ಹಾಕಿದರು.

ನಿನ್ನೆ ಸಂಸತ್‌ನಲ್ಲಿ ಮಾತನಾಡಿ ಮಹಾಘಟಬಂಧನ್ ಅನ್ನು 'ಕಲಬೆರಕೆ' ಎಂದು ಟೀಕಿಸಿದ್ದ ಮೋದಿ ಅವರ ಮಾತಿಗೆ ಪ್ರತ್ಯುತ್ತರ ನೀಡಿದ ದೇವೇಗೌಡ ಅವರು, ವಾಜಪೇಯಿ ಅವರು ಸಹ ಮಹಾಘಟಬಂಧನ್‌ನ ನಾಯಕತ್ವ ಹೊತ್ತಿದ್ದರು ಎಂದು ಹೇಳಿದರು.
ಮೈತ್ರಿ ಸರ್ಕಾರಗಳ ಬಗ್ಗೆ ಲಘುವಾದ ಧೋರಣೆ ಬೇಡ ಎಂದು ಮೋದಿ ಅವರಿಗೆ ಹೇಳಿದ ದೇವೇಗೌಡ ಅವರು, ಹೊಂದಾಣಿಕೆ ಉತ್ತಮವಾಗಿದ್ದರೆ ಮೈತ್ರಿ ಸರ್ಕಾರಗಳು ಅತ್ಯುತ್ತಮವಾಗಿ ಕಾರ್ಯ ಮಾಡಬಲ್ಲವು ಎಂದು ಹೇಳಿದ್ದಾರೆ.
ದೇವೇಗೌಡ ಅವರು ಹಾಸನ ಕ್ಷೇತ್ರದ ಪ್ರಸ್ತುತ ಸಂಸದರಾಗಿದ್ದಾರೆ. ಆದರೆ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಈ ಮುಂಚೆಯೇ ಅವರು ಸ್ಪಷ್ಟಪಡಿಸಿದ್ದಾರೆ. 'ವ್ಹೀಲ್‌ಚೇರ್ ನಲ್ಲಿ ಸಂಸತ್‌ಗೆ ಹೋಗುವುದಿಲ್ಲ' ಎಂದು ಅವರು ಹೇಳಿದ್ದರು. ಹಾಗಾಗಿಯೇ ಇದು ಲೋಕಸಭೆಯಲ್ಲಿ ಅವರ ಕೊನೆಯ ಭಾಷಣ ಆಗಿದೆ.












Click it and Unblock the Notifications