ಭಯೋತ್ಪಾದಕ ಯಾಸಿನ್ ಭಟ್ಕಳ್ ಹೋಮ್ ಸಿಕ್ ಆಗಿದ್ದೇಕೆ..?!
ನವದೆಹಲಿ, ಮಾರ್ಚ್ 01: 'ನನ್ನನ್ನು ಬೆಂಗಳೂರಿಗೆ ಕರೆದೊಯ್ಯಿರಿ... ' ಎಂದು ಇಂಡಿಯನ್ ಮಿಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಮುಖಂಡ , ಬಂಧಿತ ಯಾಸಿನ್ ಭಟ್ಕಳ್ ಪೊಲೀಸರಲ್ಲಿ ಅಂಗಲಾಚಿದ್ದಾನೆ!
ಸದ್ಯಕ್ಕೆ ದೆಹಲಿಯ ತಿಹಾರ್ ಜೈಲಿನಲ್ಲಿರುವ ಯಾಸಿನ್ ಭಟ್ಕಳ್, ತನ್ನನ್ನು ಬೆಂಗಳೂರಿಗೆ ಕರೆದೊಯ್ಯಿರಿ ಎಂದು ಜೈಲು ಅಧಿಕಾರಿಗಳಿಗೆ ಪತ್ರ ಬರೆದಿದ್ದಾನೆ.
ಇದೇನಿದು? ಯಾಸಿನ್ ಭಟ್ಕಳ್ ನಂಥ ಕ್ರೂರ ಭಯೋತ್ಪಾದಕ ಹೋಮ್ ಸಿಕ್ ಆಗಿಬಿಟ್ಟಿದ್ದಾನಾ? ಖಂಡಿತ ಇಲ್ಲ. 2010 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಯಾಸಿನ್ ಭಟ್ಕಳ್ ನನ್ನು ವಿಡಿಯೋ ಕಾನ್ಫಿರೆನ್ಸ್ ಮೂಲಕ ಮಾತನಾಡಿಸಲು ಕೋರ್ಟು ನಿರ್ಧರಿಸಿತ್ತು. ಆದರೆ ಆತನಿಗೆ ವಿಡಿಯೋ ಕಾನ್ಫಿರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಲು ಇಷ್ಟವಿಲ್ಲ. ನನಗೆ ಕ್ಯಾಮರಾ ಮುಂದೆ ಮಾತನಾಡಿ ಅಭ್ಯಾಸವಿಲ್ಲ. ಅದಕ್ಕೆಂದು ನಾನೇ ಖುದ್ದಾಗಿ ಹೋಗಿ ಬೆಂಗಳೂರಿನ ಕೋರ್ಟಿನಲ್ಲಿ ವಿಚಾರಣೆ ಎದುರಿಸುತ್ತೇನೆ ಎಂದು ದುಂಬಾಲು ಬಿದ್ದಿದ್ದಾನೆ.

ಈಗಾಗಲೇ ಮರಣದಂಡನೆ ಶಿಕ್ಷೆ ಅನುಭವಿಸುತ್ತಿರುವ ಯಾಸಿನ್ ಭಟ್ಕಳ್ ಅಹ್ಮದಾಬಾದ್, ದೆಹಲಿ, ಪುಣೆ, ವಾರಣಾಸಿ, ಹೈದರಾಬಾದ್ ಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆಂಬುದು ಸಾಬೀತಾಗಿದೆ. ಆತನ ಮೇಲೆ 149 ಜನರನ್ನು ಕೊಲೆಮಾಡಿದ ಆರೋಪವಿದೆ. ಇಷ್ಟೆಲ್ಲ ಕುಕೃತ್ಯದಲ್ಲಿ ಪಾಲ್ಗೊಂಡಿದ್ದರೂ, ಯಾಸಿನ್ ಭಟ್ಕಳ್ ಗೆ ಕ್ಯಾಮರಾ ಎದುರಿಸಲು ಸಾಧ್ಯವಿಲ್ಲ ಎಂಬುದು ಅಚ್ಚರಿಯ ವಿಷಯ!
ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಭಟ್ಕಳ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ. ತಲೆಮರೆಸಿಕೊಂಡಿದ್ದ ಆತನನ್ನು ಇಂಡೋ-ಪಾಕ್ ಗಡಿಯಲ್ಲಿ ಆಗಸ್ಟ್ 2013 ರಲ್ಲಿ ಬಂಧಿಸಲಾಗಿತ್ತು.












Click it and Unblock the Notifications