Manish Sisodia; ದೆಹಲಿ ಹೈಕೋರ್ಟ್‌ಗೆ ಹೋಗಿ ಎಂದ ಸುಪ್ರೀಂಕೋರ್ಟ್!
ಸಿಬಿಐ ತಮ್ಮನ್ನು ಬಂಧಿಸಿದ್ದನ್ನು ಪ್ರಶ್ನಿಸಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ದೆಹಲಿ ಹೈಕೋರ್ಟ್‌ಗೆ ಹೋಗಿ ಎಂದು ಹೇಳಿದೆ.
ನವದೆಹಲಿ, ಫೆಬ್ರವರಿ 28; ದೆಹಲಿ ಅಬಕಾರಿ ನೀತಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ದೆಹಲಿ ಉಪಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಬಂಧಿಸಿದೆ. ಸಿಬಿಐ ಕ್ರಮ ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸಿಬಿಐ ವಿಶೇಷ ಕೋರ್ಟ್ ಸೋಮವಾರ ಮನೀಶ್ ಸಿಸೋಡಿಯಾರನ್ನು ಮಾರ್ಚ್ 4ರ ತನಕ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು. ಮನೀಶ್ ಸಿಸೋಡಿಯಾ ಬಂಧನ ವಿಚಾರ ಬಿಜೆಪಿ ಮತ್ತು ಎಎಪಿ ನಡುವಿನ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಂಗಳವಾರ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಅವರಿದ್ದ ಪೀಠದಲ್ಲಿ ನಡೆಯಿತು. ಮಂಗಳವಾರ ಬೆಳಗ್ಗೆ ಅರ್ಜಿ ಸಲ್ಲಿಕೆ ಮಾಡಿ, ತುರ್ತು ವಿಚಾರಣೆಗೆ ಮನವಿ ಮಾಡಲಾಗಿತ್ತು. ನ್ಯಾಯಪೀಠ ಮಧ್ಯಾಹ್ನ ಅರ್ಜಿ ವಿಚಾರಣೆಗೆ ಸಮಯ ನಿಗದಿ ಮಾಡಿತ್ತು.

ಮಧ್ಯಾಹ್ನ ಮನೀಶ್ ಸಿಸೋಡಿಯಾ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ಸಿಬಿಐನಿಂದ ಮನೀಶ್ ಸಿಸೋಡಿಯಾ ಬಂಧನ ಕಾನೂನಿಗೆ ವಿರುದ್ಧವಾದದ್ದು, ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರಿಲ್ಲ. ಸಿಬಿಐ ದಾಳಿಯ ವೇಳೆ ಅವರ ಮನೆಯಲ್ಲಿ ಹಣ ಸಿಕ್ಕಿಲ್ಲ ಎಂದು ವಾದಿಸಿದರು. ಮನೀಶ್ ಸಿಸೋಡಿಯಾ ಸಿಬಿಐ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂಬುದನ್ನು ಒಪ್ಪಲಾಗದು ಎಂದರು.
ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿ. ನಾವು ಅರ್ಜಿ ವಿಚಾರಣೆಗೆ ಸಿದ್ಧರಿದ್ದೇವೆ. ಆದರೆ ಈ ಹಂತದಲ್ಲಿ ಇಲ್ಲಿ ವಿಚಾರಣೆ ನಡೆಸಲು ಆಗುವುದಿಲ್ಲ ಎಂದರು. ಕ್ರಿಮಿನಲ್ ಪ್ರೊಸಿಜರ್ ಕೋಡ್ ಸೆಕ್ಷನ್ 482ರ ಅಡಿಯಲ್ಲಿ ಅರ್ಜಿದಾರರು ಹೈಕೋರ್ಟ್‌ಗೆ ಹೋಗಬಹುದು ಎಂದು ನ್ಯಾಯಪೀಠ ಹೇಳಿತು. ನೀವು ದೆಹಲಿಯಲ್ಲಿ ಇದ್ದೀರಿ ಎಂಬ ಕಾರಣಕ್ಕೆ ಇಲ್ಲಿ ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಹೇಳಿದರು.

ದೆಹಲಿಯ ಹೊಸ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ. ಕಿಕ್ ಬ್ಯಾಕ್ ಪಡೆದು ಕೆಲವು ವ್ಯಕ್ತಿಗಳಿಗೆ ಅನುಕೂಲವಾಗುವಂತೆ ನೀತಿ ರೂಪಿಸಲಾಗಿದೆ ಎಂಬುದು ಆರೋಪವಾಗಿದೆ. ಹೊಸ ಅಬಕಾರಿ ನೀತಿಯನ್ನು ಲೆಫ್ಟಿನೆಂಟ್ ಗೌರ್ನರ್ ವಿ. ಕೆ. ಸಕ್ಸೇನಾ ತಿರಸ್ಕಾರ ಮಾಡಿದ್ದಾರೆ. ಈ ನೀತಿ ರೂಪಿಸುವಲ್ಲಿ ಮನೀಶ್ ಸಿಸೋಡಿಯಾ ಅವರ ಪಾತ್ರವಿದೆ. ಈ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಮನೀಶ್ ಸಿಸೋಡಿಯಾ ನಿವಾಸದ ಮೇಲೆ ದಾಳಿಯನ್ನು ಸಹ ನಡೆಸಲಾಗಿತ್ತು.
ಸಿಬಿಐ ಫೆಬ್ರವರಿ 26ರ ಭಾನುವಾರ 8 ಗಂಟೆಗಳ ಕಾಲ ಮನೀಶ್ ಸಿಸೋಡಿಯಾ ವಿಚಾರಣೆ ನಡೆಸಿತ್ತು, ಬಳಿಕ ಬಂಧಿಸಲಾಗಿತ್ತು. ಸೋಮವಾರ ಸಿಬಿಐ ವಿಶೇಷ ಕೋರ್ಟ್ ಮುಂದೆ ಅವರನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಸಿಬಿಐ ವಶಕ್ಕೆ ಕೇಳಲಾಗಿತ್ತು. ಸಿಬಿಐ ವಾದ ಪುರಸ್ಕರಿಸಿದ್ದ ನ್ಯಾಯಾಲಯ ಮಾರ್ಚ್ 4ರ ತನಕ ಮನೀಶ್ ಸಿಸೋಡಿಯಾರನ್ನು ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು.
ಎಎಪಿ ನಾಯಕ ಮನೀಶ್ ಸಿಸೋಡಿಯಾ ಬಂಧನ ಎಎಪಿ ಮತ್ತು ಬಿಜೆಪಿ ನಡುವಿನ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಎಎಪಿ ಕಾರ್ಯಕರ್ತರು ವಿವಿಧ ರಾಜ್ಯಗಳಲ್ಲಿ ಸೋಮವಾರ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಮನೀಶ್ ಸಿಸೋಡಿಯಾಗೆ ಬೆಂಬಲ ನೀಡಿ ರಾಜ್‌ಘಾಟ್‌ಗೆ ಹೊರಟಿದ್ದ ಎಎಪಿ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದರು.
ಸಚಿವ ಸ್ಥಾನಕ್ಕೆ ರಾಜೀನಾಮೆ; ಸಿಬಿಐನಿಂದ ಬಂಧನಕ್ಕೊಳಗಾಗಿರುವ ಮನೀಶ್ ಸಿಸೋಡಿಯಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜೀನಾಮೆ ಅಂಗೀಕಾರ ಮಾಡಿದ್ದು, ಶೀಘ್ರವೇ ಸಂಪುಟ ವಿಸ್ತರಣೆ ಮಾಡಿ ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ.
ಮನೀಶ್ ಸಿಸೋಡಿಯಾ 18 ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದರು. ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸಹ 10 ತಿಂಗಳಿನಿಂದ ಜೈಲಿನಲ್ಲಿದ್ದು, ಅವರ ಖಾತೆ ಸಹ ಮನೀಶ್ ಸಿಸೋಡಿಯಾ ಬಳಿ ಇತ್ತು. ಮಂಗಳವಾರ ಇಬ್ಬರೂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.












Click it and Unblock the Notifications