ಸುನಂದಾ ಕೊಲೆ: ಪತ್ರಕರ್ತೆ ನಳಿನಿ ಸಿಂಗ್ ವಿಚಾರಣೆ
ನವದೆಹಲಿ, ಜ.23: ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಕೊಲೆ ಪ್ರಕರಣದ ತನಿಖೆ ಮುಂದುವರೆಸಿರುವ ವಿಶೇಷ ತನಿಖಾ ದಳ ಈಗ ಪತ್ರಕರ್ತ ಮೇಲೆ ಕಣ್ಣಿಟ್ಟಿದೆ. ಹಿರಿಯ ಪತ್ರಕರ್ತೆ ನಳಿನಿ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಲು ಎಸ್ ಐಟಿ ಸಜ್ಜಾಗಿದೆ.
ಸುನಂದಾ ಪುಷ್ಕರ್ ಕೊಲೆ ಪ್ರಕರಣದಲ್ಲಿ ಪತ್ರಕರ್ತೆ ನಳಿನಿ ವಿಚಾರಣೆ ಪ್ರಮುಖ ತಿರುವು ನೀಡುವ ಸಾಧ್ಯತೆಯಿದೆ. ನಳಿನಿ ಹಾಗೂ ಸುನಂದಾ ಇಬ್ಬರಲ್ಲೂ ಆಪ್ತತೆ ಬೆಳೆದಿತ್ತು ಹಾಗೂ ಕಾಲಕಾಲಕ್ಕೆ ಇಬ್ಬರು ಮಾತುಕತೆ ನಡೆಸುತ್ತಿದ್ದರು ಎಂಬ ಅಂಶ ಗುಟ್ಟಾಗೇನೂ ಉಳಿದಿಲ್ಲ.
ಐಪಿಎಲ್ ವಿವಾದದ ಲಿಂಕ್
ನಳಿನಿ ಸಿಂಗ್ ಅವರು ಇತ್ತೀಚೆಗೆ ಐಪಿಎಲ್ ವಿವಾದ, ಕೇರಳ ಟಸ್ಕರ್ಸ್ ಖರೀದಿ ಅವ್ಯವಹಾರದ ಬಗ್ಗೆ ಮಾತನಾಡುತ್ತಾ ಸುನಂದಾ ಪುಷ್ಕರ್ ಹೆಸರು ಪ್ರಸ್ತಾಪಿಸಿದ್ದರು. ಅದರೆ, ಸ್ಪಷ್ಟವಾದ ಅಭಿಪ್ರಾಯ ಮಂಡನೆ ಮಾಡುವಲ್ಲಿ ವಿಫಲರಾಗಿದ್ದರು.

ಐಪಿಎಲ್ ನಲ್ಲಿ ನಡೆದ ವಿವಾದಗಳ ಬಗ್ಗೆ ಹೇಳಲು ಹೊರಟ ನಳಿನಿ, ಸುನಂದಾ ಹೆಸರನ್ನು ಬಳಸಿದ್ದೇಕೆ? ಎಂಬುದನ್ನು ತಿಳಿಯಲು ಎಸ್ ಐಟಿ ಮುಂದಾಗಿದೆ. ಇದು ಕೊಲೆ ಪ್ರಕರಣಕ್ಕೆ ಹೇಗೆ ಲಿಂಕ್ ಆಗುವುದೋ ತನಿಖಾ ತಂಡವೇ ನಿರ್ಧರಿಸಬೇಕಿದೆ.
ವಿಚಾರಣೆ ಹೊಸದೇನಲ್ಲ
ಸುನಂದಾ ಪುಷ್ಕರ್ ಸಾವಿನ ನಂತರ ತನ್ನ ಹಾಗೂ ಸುನಂದಾ ನಡುವಿನ ಒಡನಾಟದ ಬಗ್ಗೆ ನಳಿನಿ ಅವರು ಮ್ಯಾಜಿಸ್ಟ್ರೇಟ್ ಕೋರ್ಟಿಗೆ ತೆರಳಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪೊಲೀಸರು ತನ್ನನ್ನು ಹೆಚ್ಚು ಪ್ರಶ್ನಿಸುವ ಅಗತ್ಯ ಕಾಣಿಸುವುದಿಲ್ಲ ಎಂದಿದ್ದರು.
ತರಾರ್- ತರೂರ್ ಮಾತುಕತೆ
ಪಾಕಿಸ್ತಾನಿ ಪತ್ರಕರ್ತೆ ತರಾರ್ ಹಾಗೂ ಶಶಿ ತರೂರ್ ನಡುವೆ ನಡೆದಿದೆ ಎನ್ನಲಾದ ಪ್ರಣಯ ಸಂದೇಶ ವಿನಿಮಯದ ಬಗ್ಗೆ ಸುನಂದಾ ಅವರು ನಳಿನಿ ಬಳಿ ಹೇಳಿಕೊಂಡಿದ್ದರಂತೆ. ಆದರೆ, ಶಶಿ ಅವರು ಬ್ಲಾಕ್ ಬೆರಿ ಬಿಬಿಎಂ ಸಂದೇಶಗಳನ್ನು ಅಳಿಸಿ ಹಾಕಿರುವುದು ಪ್ರಮುಖಕ್ಕೆ ತಿರುವು ನೀಡಿದೆ. ನಳಿನಿ ವಿಚಾರಣೆ ವೇಳೆ ಯಾವ ವಿಷಯ ಬಹಿರಂಗ ಪಡಿಸುತ್ತಾರೆ ಎಂಬುದರ ಮೇಲೆ ಮುಂದಿನ ತನಿಖೆ ದಿಕ್ಕು ತಿಳಿಯಲಿದೆ.












Click it and Unblock the Notifications