ಶ್ರೀಗಳಿಗೆ ಭಾರತ ರತ್ನ ನೀಡಿ: ಸಂಸತ್‌ನಲ್ಲಿ ರಾಜ್ಯ ಸಂಸದರ ಒತ್ತಾಯ
ನವದೆಹಲಿ, ಫೆಬ್ರವರಿ 04: ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಸಂಸತ್‌ನಲ್ಲಿ ಇಂದು ರಾಜ್ಯದ ಸಂಸದರು ಒತ್ತಾಯ ಮಾಡಿದರು.
ಲೋಕಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ತುಮಕೂರಿನ ಸಂಸದ ಮುದ್ದಹನುಮೇಗೌಡ ಅವರು ಕರ್ನಾಟಕ ಸರ್ಕಾರ ಶಿಫಾರಸ್ಸು ಮಾಡಿದ್ದರೂ ಸಹ ಕೇಂದ್ರವು ಶ್ರೀಗಳಿಗೆ ಭಾರತ ರತ್ನ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೋಟ್ಯಂತರ ಭಕ್ತಾಧಿಗಳನ್ನು ಹೊಂದಿರುವ ಶ್ರೀಗಳಿಗೆ ಭಾರತ ರತ್ನ ನೀಡದೆ ಸರ್ಕಾರವು ಅವರ ಭಕ್ತಾಧಿಗಳಿಗೆ ನಿರಾಸೆ ಉಂಟು ಮಾಡಿದೆ. ಕರ್ನಾಟಕದ ಸರ್ಕಾರದ ಮನವಿಯನ್ನು ತಿರಸ್ಕರಿಸಿ ಅವಮಾನಿಸಿದೆ ಎಂದು ಅವರು ಹೇಳಿದರು.

ಮುದ್ದಹನುಮೇಗೌಡ ಅವರು ಮಾತನಾಡುವ ಸಮಯ ಅವರನ್ನು ಚಾಮರಾಜನಗರ ಸಂಸದ ಧೃವನಾರಾಯಣ್ ಹಾಗೂ ಚಿತ್ರದುರ್ಗ ಸಂಸದ ಬಿಎನ್ ಚಂದ್ರಪ್ಪ ಅವರು ಸೇರಿಕೊಂಡು ಬೆಂಬಲ ಸೂಚಿಸಿದರು.
ಕೊಲ್ಕತ್ತ ಸಿಬಿಐ-ಪೊಲೀಸ್ ವಿಷಯದ ಗಲಾಟೆಯ ನಡುವೆ ರಾಜ್ಯದ ಸಂಸದರ ಮನವಿಗಳ ಬಗ್ಗೆ ಯಾರೂ ಹೆಚ್ಚು ಗಮನ ವಹಿಸಲಿಲ್ಲ.
ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಸೇರಿದಂತೆ ಹಲವು ರಾಜಕೀಯ ಮುಖಂಡರು, ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯ ಮಾಡಿದ್ದರೂ ಆದರೂ ಸಹ ಈ ಬಾರಿ ಶ್ರೀಗಳಿಗೆ ಭಾರತ ರತ್ನ ನೀಡಲಾಗಿಲ್ಲ.












Click it and Unblock the Notifications