'ಆಘಾತಕಾರಿ': ರದ್ದು ಮಾಡಿದ ಕಾನೂನಿನಡಿ ಪ್ರಕರಣಗಳ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ನೋಟಿಸ್
ನವದೆಹಲಿ, ಜು.05: ಆನ್‌ಲೈನ್‌ನಲ್ಲಿ "ಆಕ್ರಮಣಕಾರಿ" ವಿಷಯವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಜನರನ್ನು ಬಂಧಿಸಲು ಪೊಲೀಸರಿಗೆ ಅವಕಾಶ ನೀಡುವ ಐಟಿ ಕಾಯ್ದೆಯ ಸೆಕ್ಷನ್ 66 ಎ ಅನ್ನು ರದ್ದು ಮಾಡಿದ್ದರೂ ಈ ಕಾಯ್ದೆ ಅಡಿಯಲ್ಲಿ 1,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬುದನ್ನು ತಿಳಿದು ಸುಪ್ರೀಂ ಕೋರ್ಟ್ ಸೋಮವಾರ ಆಘಾತಗೊಂಡಿದೆ ಹಾಗೂ ಅಸಮಾಧಾನ ವ್ಯಕ್ತಪಡಿಸಿದೆ. ಹಾಗೆಯೇ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಆನ್‌ಲೈನ್‌ನಲ್ಲಿ "ಆಕ್ರಮಣಕಾರಿ" ವಿಷಯವನ್ನು ಪೋಸ್ಟ್ ಮಾಡಿದವರನ್ನು ಬಂಧಿಸಲು ಪೊಲೀಸರಿಗೆ ಅವಕಾಶ ನೀಡುವ ಐಟಿ ಕಾಯ್ದೆಯ ಸೆಕ್ಷನ್ 66 ಎ ಅನ್ನು ಮಾರ್ಚ್ 24, 2015 ರಂದು ಉನ್ನತ ನ್ಯಾಯಾಲಯವು ತನ್ನ ಮಹತ್ವದ ತೀರ್ಪಿನಲ್ಲಿ ರದ್ದು ಮಾಡಿದೆ.
ಆದರೂ ಈ ಕಾನೂನನ್ನು ಬಳಸಿರುವುದನ್ನು ಸುಪ್ರೀಂ ಕೋರ್ಟ್ "ಅಸ್ಪಷ್ಟ", "ಅಸಂವಿಧಾನಿಕ" ಮತ್ತು "ವಾಕ್ ಸ್ವಾತಂತ್ಯ್ರದ ಉಲ್ಲಂಘನೆ" ಎಂದು ಬಣ್ಣಿಸಿದೆ. "ಇದು ಆಘಾತಕಾರಿ, ನಾವು ನೋಟಿಸ್ ನೀಡುತ್ತೇವೆ" ಎಂದು ನ್ಯಾಯಮೂರ್ತಿಗಳಾದ ಆರ್ ನಾರಿಮನ್, ಕೆಎಂ ಜೋಸೆಫ್ ಮತ್ತು ಬಿಆರ್ ಗವಾಯಿಯನ್ನು ಒಳಗೊಂಡ ತ್ರಿ ಸದಸ್ಯ ನ್ಯಾಯ ಪೀಠ ಹೇಳಿದೆ. "ಅದ್ಭುತ. ನಡೆಯುತ್ತಿರುವುದು ಭಯಾನಕವಾಗಿದೆ," ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದ್ದಾರೆ.

2 ವಾರದಲ್ಲಿ ಪ್ರತಿಕ್ರಿಯೆ ನೀಡಿ: ಕೇಂದ್ರಕ್ಕೆ ಸುಪ್ರೀಂ ಗಡುವು
ಈ ಕಾನೂನಿನಡಿಯಲ್ಲಿ ಎಫ್‌ಐಆರ್‌ಗಳನ್ನು ನೋಂದಾಯಿಸುವಂತಿಲ್ಲ ಎಂದು ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಎಂಬ ಎನ್‌ಜಿಒವೊಂದರ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದ್ದು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿ ಎರಡು ವಾರಗಳ ಅವಧಿಯಲ್ಲಿ ಕೇಂದ್ರದಿಂದ ಪ್ರತಿಕ್ರಿಯೆ ಕೋರಿದೆ.

ಸೆಕ್ಷನ್ ರದ್ದಾದರೂ ಪ್ರಕರಣಗಳ ದಾಖಲು
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಸಂಜಯ್ ಪಾರಿಕ್, "ಪ್ರಕರಣಗಳು ಹೇಗೆ ಹೆಚ್ಚಿವೆ. ಜನರು ತೊಂದರೆ ಅನುಭವಿಸುತ್ತಿದ್ದಾರೆ," ಎಂದು ನ್ಯಾಯಾಲಯಕ್ಕೆ ತಿಳಿಸಿದರು. ರದ್ದು ಮಾಡಿದ ಕಾನೂನಿನಡಿಯಲ್ಲಿ ಎಫ್ಐಆರ್ ಮತ್ತು ಸಕ್ರಿಯ ತನಿಖೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲು ಕೇಂದ್ರಕ್ಕೆ ನಿರ್ದೇಶಿಸುವಂತೆ ಒತ್ತಾಯಿಸಿದರು. ಸೆ. 66 ಎ ರದ್ದುಗೊಳಿಸುವ ಮೊದಲು 11 ರಾಜ್ಯಗಳಲ್ಲಿ 229 ಪ್ರಕರಣಗಳು ದಾಖಲಾಗಿದೆ. ಆದರೆ ರದ್ದಾದ ಬಳಿಕ ಈ ಸೆಕ್ಷನ್ ಅಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1,307 ಕ್ಕೆ ಏರಿದೆ, ಅದರಲ್ಲಿ 570 ಇನ್ನೂ ಬಾಕಿ ಉಳಿದಿವೆ ಎಂದು ಕೂಡಾ ಉಲ್ಲೇಖ ಮಾಡಿದರು.

ಸೆಕ್ಷನ್ ಪಕ್ಕದಲ್ಲೇ 'ರದ್ದು' ಎಂದು ಉಲ್ಲೇಖ ಮಾಡಿ!
ಇನ್ನು ಕೇಂದ್ರ ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, "ಅದನ್ನು ವಿಭಾಗೀಯ ಪೀಠದಿಂದ ರದ್ದು ಮಾಡಲಾಗಿದ್ದರೂ, ಈ ಸೆಕ್ಷನ್ 66 ಎ ಇನ್ನೂ ಇದೆ. ಪೊಲೀಸರು ಪ್ರಕರಣ ದಾಖಲಿಸಬೇಕಾದಾಗ ಅದು ಇನ್ನೂ ಇದೆ. ಆದರೆ ಸುಪ್ರೀಂ ಕೋರ್ಟ್ ಇದನ್ನು ರದ್ದು ಮಾಡಿದೆ ಎಂದು ಮಾತ್ರ ಉಲ್ಲೇಖ ಮಾಡಲಾಗಿದೆ. ಆ ಸೆಕ್ಷನ್‌ನ ಪಕ್ಕದಲ್ಲೇ ಬ್ರಾಕೆಟ್‌ನಲ್ಲಿ ರದ್ದು ಮಾಡಲಾಗಿದೆ ಎಂದು ಉಲ್ಲೇಖ ಮಾಡಬೇಕಾಗಿದೆ," ಎಂದು ವಾದ ಮಾಡಿದ್ದಾರೆ.

ಸೆಕ್ಷನ್ ರದ್ದತಿಗೆ ಕಾರಣವೇನು?
ಶ್ರೇಯಾ ಸಿಂಘಾಲ್ ಎಂಬ ಕಾನೂನು ವಿದ್ಯಾರ್ಥಿಯು ಈ ಸೆಕ್ಷನ್ ಬಗ್ಗೆ ಸವಾಲು ಹಾಕಿದ ನಂತರ, ಮಾರ್ಚ್ 24, 2015 ರಂದು ಸೆಕ್ಷನ್ ರದ್ದು ಮಾಡಲಾಯಿತು. ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಮರಣದ ನಂತರ ನಗರದಲ್ಲಿ ನಡೆದ ಒಟ್ಟು ಘಟನೆಯ ಬಗ್ಗೆ ಟೀಕಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಇಬ್ಬರು ಯುವತಿಯರನ್ನು 2012 ರಲ್ಲಿ ಮುಂಬೈನಲ್ಲಿ ಬಂಧಿಸಿದ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡಲಾಗಿತ್ತು. "ಜೈಲಿಗೆ ಹೋಗುವ ಭಯದಿಂದಾಗಿ ಯಾರು ಕೂಡಾ ಯಾವುದೇ ಪೋಸ್ಟ್ ಮಾಡಲು ಹೆದರುವಂತೆ ಆಗಬಾರದು," ಎಂದು ಹೇಳಿದ್ದ ಶ್ರೇಯಾ ಸಿಂಘಾಲ್, "ದ್ವೇಷದ ಭಾಷಣವನ್ನು ಅಂತರ್ಜಾಲದಲ್ಲಿ ನಿಯಂತ್ರಿಸಲು ಇತರ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು," ಎಂದು ತಿಳಿಸಿದ್ದರು.
ಈ ಸೆಕ್ಷನ್ 66 ಎ "ಅಸ್ಪಷ್ಟವಾಗಿದೆ ಮತ್ತು ಪೊಲೀಸರಿಗೆ ಕಾನೂನಿನ ದುರುಪಯೋಗವನ್ನು ಮಾಡಲು ಅನುಮತಿಸುತ್ತದೆ" ಎಂಬುದು ಹೆಚ್ಚಿನ ಅರ್ಜಿದಾರರ ವಾದವಾಗಿತ್ತು. ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರ, ಅಂತರ್ಜಾಲದಲ್ಲಿ ನಿಂದನೆ ಮತ್ತು ಮಾನಹಾನಿಯನ್ನು ಎದುರಿಸಲು ಕಾನೂನು ಅಗತ್ಯ ಎಂದು ಹೇಳಿತ್ತು. ಬಿಜೆಪಿ ಸರ್ಕಾರ ಕೂಡ ನ್ಯಾಯಾಲಯದಲ್ಲಿ ಕಾನೂನನ್ನು ಸಮರ್ಥಿಸಿತ್ತು.
"ಯಾವುದೇ ವ್ಯಕ್ತಿಯು ಕಂಪ್ಯೂಟರ್ ಸಂಪನ್ಮೂಲದಿಂದ ಯಾವುದೇ ಮಾಹಿತಿಯನ್ನು ಕಳುಹಿಸಿದ್ದು ಅದು ಅತ್ಯಂತ ಆಕ್ರಮಣಕಾರಿ, ಭೀತಿಗೊಳಿಸುವುದಾದರೆ ಅಥವಾ ಯಾವುದೇ ಮಾಹಿತಿ ಸುಳ್ಳು ಎಂದು ತಿಳಿದಿದ್ದರೂ ಕಿರಿಕಿರಿ, ಅನಾನುಕೂಲತೆ, ಅಪಾಯ, ಅಡಚಣೆ, ಅವಮಾನ ಉಂಟು ಮಾಡುವ ಉದ್ದೇಶದಿಂದ ಆ ಸಂದೇಶ ಹಂಚಿಕೊಂಡಿದ್ದರೆ, ಆ ವ್ಯಕ್ತಿಗೆ ಮೂರು ವರ್ಷಗಳವರೆಗೆ ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಬಹುದು," ಎಂದು ಈ ಕಾನೂನು ಹೇಳುತ್ತದೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications