ಟಿಪ್ಪುಗೆ ಸಲಾಂ ಎಂದ ಇಮ್ರಾನ್ ಖಾನ್ ಗೆ ಬಹುಪರಾಕ್ ಎಂದ ಶಶಿ ತರೂರ್!
ನವದೆಹಲಿ, ಮೇ 07: ವಿವಾದಾತ್ಮಕ ವ್ಯಕ್ತಿಯಾದ ಟಿಪು ಸುಲ್ತಾನ್ ನನ್ನು 'ಮಹಾನ್ ವೀರ' ಎಂದು ಕರೆದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ನಡೆಯನ್ನು ಶಶಿ ತರೂರ್ ಸ್ವಾಗತಿಸಿದ್ದಾರೆ.
ಈ ಮೂಲಕ ಅವರು ಹಲವು ಟಿಪು ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೇ 4 ರಂದು ಟಿಪ್ಪು ಸುಲ್ತಾನ್ ನಿಧನರಾದ ದಿನವಾದ್ದರಿಂದ ಈ ದಿನವನ್ನು ಇಮ್ರಾನ್ ಖಾನ್ ಟ್ವಿಟ್ಟರ್ ನಲ್ಲಿ ಸ್ಮರಿಸಿದ್ದರು. "ಇಂದು ಟಿಪು ಸುಲ್ತಾನ್ ಅವರು ನಿಧನರಾದ ದಿನ. ಅವರೊಬ್ಬ ಮಹಾನ್ ನಾಯಕ. ಗುಲಾಮರಾಗಿ ಬದುಕುವ ಇಷ್ಟವಿಲ್ಲದೆ, ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಪಣವಾಗಿಟ್ಟ ಧೀಮಂತ ನಾಯಕ ಆತ" ಎಂದು ಖಾನ್ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ಶಶಿ ತರೂರ್, "ಇಮ್ರಾನ್ ಖಾನ್ ಅವರ ಬಗ್ಗೆ ನಾನು ಹೆಮ್ಮೆಯಿಂದ ಒಂದು ವಿಷಯ ಹೇಳಬಲ್ಲೆ. ಅವರು ಭಾರತೀಯ ಉಪಖಂಡಗಳ ಇತಿಹಾಸವನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿದ್ದಾರೆ" ಎಂದು ಖಾನ್ ಅವರನ್ನು ಹೊಗಳಿದ್ದರು.

ಪ್ರತಿ ವರ್ಷ ನವೆಂಬರ್ 10 ರಂದು ಟಿಪು ಜಯಂತಿ ಆಚರಿಸುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಟನೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications