ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೇಜ್ರಿವಾಲ್ ತುರ್ತು ಕ್ರಮ ಘೋಷಣೆ
ನವದೆಹಲಿ, ನವೆಂಬರ್ 13: ದೆಹಲಿಯ ವಾಯು ಮಾಲಿನ್ಯ ನಿಯಂತ್ರಿಸಿ ಗುಣಮಟ್ಟ ಸುಧಾರಿಸುವ ಬಗ್ಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದ ಹಿನ್ನೆಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ನಗರದಲ್ಲಿ ಗಾಳಿ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ತುರ್ತು ಕ್ರಮಗಳನ್ನು ಘೋಷಿಸಿದ್ದಾರೆ.
ದೆಹಲಿಯಲ್ಲಿ ಮುಂದಿನ ಒಂದು ವಾರದವರೆಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಎಲ್ಲ ರೀತಿ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಇದರ ಜೊತೆ ಎಲ್ಲ ಸರ್ಕಾರಿ ಕಚೇರಿಗಳ ಸಿಬ್ಬಂದಿ ಮತ್ತು ಅಧಿಕಾರಿಗಳು ಮನೆಗಳಿಂದಲೇ ಕೆಲಸ (ವರ್ಕ್ ಫ್ರಾಮ್ ಹೋಮ್) ಮಾಡುವಂತೆ ಸೂಚನೆ ನೀಡಲಾಗಿದೆ.
ದೆಹಲಿಯಲ್ಲಿ ದಟ್ಟ ಹೊಗೆ: ಎರಡು ದಿನ ಲಾಕ್‌ಡೌನ್ ಮಾಡ್ತೀರಾ ಎಂದ ನ್ಯಾಯಾಲಯ
ಶನಿವಾರ ತುರ್ತು ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸುಪ್ರೀಂಕೋರ್ಟ್ ಸೂಚಿಸುವುದಕ್ಕೂ ಮೊದಲೇ ರಾಜ್ಯ ಸರ್ಕಾರ ಲಾಕ್‌ಡೌನ್ ಪ್ರಸ್ತಾವನೆಯನ್ನು ಇಟ್ಟಿದ್ದು ಎಂದು ಹೇಳಿದರು.
ಶಾಲೆಗೆ ರಜೆ, ಆನ್‌ಲೈನ್‌ನಲ್ಲಿ ತರಗತಿ:
ದೆಹಲಿಯಲ್ಲಿ ವಾಯು ಮಾಲಿನ್ಯ ಮಟ್ಟವನ್ನು ಗಮನದಲ್ಲಿ ಇಟ್ಟುಕೊಂಡು ಸೋಮವಾರದಿಂದ ಮುಂದಿನ ಒಂದು ವಾರದವರೆಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ. "ಸೋಮವಾರದಿಂದ ಒಂದು ವಾರದವರೆಗೆ, ಶಾಲೆಗಳು ಮುಚ್ಚಿರುತ್ತವೆ; ಮಕ್ಕಳು ಕಲುಷಿತ ಗಾಳಿಯನ್ನು ಉಸಿರಾಡದಂತೆ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದ್ದು, ಆನ್‌ಲೈನ್‌ನಲ್ಲಿ ತರಗತಿಗಳು ಮುಂದುವರಿಯುತ್ತವೆ," ಎಂದು ಕೇಜ್ರಿವಾಲ್ ಹೇಳಿದರು.
ಮನೆಗಳಿಂದಲೇ ಕೆಲಸ ಮಾಡಲು ಸಲಹೆ:
ಸರ್ಕಾರಿ ಕಚೇರಿ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದ್ದು, ಖಾಸಗಿ ಕಚೇರಿಗಳಿಗೆ ಪ್ರತ್ಯೇಕ ಸಲಹೆಯನ್ನು ನೀಡಲಾಗುವುದು ಎಂದು ಕೇಜ್ರಿವಾಲ್ ಹೇಳಿದರು. ದೆಹಲಿಯಲ್ಲಿ ನಾಲ್ಕು ದಿನಗಳ ಕಾಲ ಅಂದರೆ ನವೆಂಬರ್ 14 ರಿಂದ 17 ರವರೆಗೆ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ನೆರೆಯ ರಾಜ್ಯಗಳಲ್ಲಿ ಈರುಳ್ಳಿ ಸುಡುವುದರಿಂದ ದೆಹಲಿಯಲ್ಲಿ ಮಾಲಿನ್ಯದ ಮಟ್ಟ ಹೆಚ್ಚುತ್ತಿದೆ. ಇದನ್ನು ಎದುರಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕೇಜ್ರಿವಾಲ್ ಕರೆ ನೀಡಿದರು.
ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ:
ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು "ತುರ್ತು" ಪರಿಸ್ಥಿತಿ ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್, ಗಾಳಿಯ ಗುಣಮಟ್ಟವನ್ನು ಸುಧಾರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್, ವಾಹನಗಳ ಸಂಚಾರಕ್ಕೆ ಕಡಿವಾಣ ಮತ್ತು ಕ್ಲ್ಯಾಂಪ್ ಮಾಡುವಂತಹ ಕಠಿಣ ಕ್ರಮಗಳಿಗೆ ಕೋರ್ಟ್ ಸಲಹೆ ನೀಡಿತ್ತು.
ವಾಯು ಗುಣಮಟ್ಟವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂಬುದರ ಬಗ್ಗೆ ಸೋಮವಾರದೊಳಗೆ ವರದಿ ಸಲ್ಲಿಸಬೇಕು ಎಂದು ನ್ಯಾ. ಎನ್ ವಿ ರಮಣ ನೇತೃತ್ವದ ಪೀಠ ಸೂಚಿಸಿದೆ. "ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ನೀವು ಹೇಗೆ ಯೋಜಿಸುತ್ತೀರಿ ಎಂದು ನಮಗೆ ತಿಳಿಸಿ? ಎರಡು ದಿನಗಳ ಲಾಕ್‌ಡೌನ್? AQI (ವಾಯು ಗುಣಮಟ್ಟ ಸೂಚ್ಯಂಕ) ಮಟ್ಟವನ್ನು ಕಡಿಮೆ ಮಾಡಲು ನಿಮ್ಮ ಯೋಜನೆ ಏನು?," ಎಂದು ಕೋರ್ಟ್ ಪ್ರಶ್ನಿಸಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ವಾಯುವಿನ ಗುಣಮಟ್ಟ
ಶುಕ್ರವಾರದ ಹೊತ್ತಿಗೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು "ಅತ್ಯಂತ ಕಳಪೆ" ಮಟ್ಟದಿಂದ ಸುಧಾರಿಸಿದಂತೆ ಗೋಚರಿಸಿತು. ರಾಷ್ಟ್ರ ರಾಜಧಾನಿಯನ್ನು ಆವರಿಸಿರುವ ಹೊಗೆ ಮತ್ತು ಮಬ್ಬಿನ ದಟ್ಟವಾದ ಪದರದಿಂದ ಜನರು ಜಾಗೃತರಾದರು. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (SAFAR) ಪ್ರಕಾರ ದೆಹಲಿಯಲ್ಲಿ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 390 ಆಗಿತ್ತು. ಸಂಜೆ 4 ರ ಹೊತ್ತಿಗೆ ದೆಹಲಿಯಲ್ಲಿ 24-ಗಂಟೆಗಳ ಸರಾಸರಿ AQI 471 ಆಗಿತ್ತು. ಇದು ಈ ಋತುವಿನಲ್ಲೇ ಅತ್ಯಂತ ಕಳಪೆ ಗುಣಮಟ್ಟ ಎಂದು ದಾಖಲಾಗಿದ್ದು, ಗುರುವಾರ ಅದೇ ವಾಯು ಗುಣಮಟ್ಟ ಸೂಚ್ಯಂಕ 411 ಆಗಿತ್ತು.