ಕೃಷ್ಣಮೃಗ ಬೇಟೆ: ಸಲ್ಮಾನ್ 'ಫಾರೀನ್ ಟೂರಿಗೆ ಕಂಟಕ
ನವದೆಹಲಿ, ಜ.14: ಹಿಂದಿ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣ ಸದ್ಯಕ್ಕೆ ಮುಕ್ತಾಯ ಕಾಣುವಂತೆ ತೋರುತ್ತಿಲ್ಲ. ಶೂಟಿಂಗ್ ಗಾಗಿ ಬ್ರಿಟನ್ ಗೆ ತೆರಳಲು ಅನುಮತಿ ನೀಡುವಂತೆ ಸಲ್ಮಾನ್ ಕೋರಿದ್ದು ಈಗ ಬೆಲೆ ಕಳೆದುಕೊಂಡಿದೆ. ಈ ಪ್ರಕರಣದಲ್ಲಿ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವಂತೆ ರಾಜಸ್ಥಾನ ಹೈಕೋರ್ಟಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಮುಕ್ತಾಯವಾಗಿದೆ. ಜಸ್ಟೀಸ್ ಎಸ್ ಜೆ ಮುಖ್ಯೋಪಾಧ್ಯಾಯ್ ಹಾಗೂ ಎಕೆ ಗೋಯಲ್ ಅವರಿದ್ದ ನ್ಯಾಯಪೀಠ ಆದೇಶವನ್ನು ಕಾಯ್ದಿರಿಸಿತ್ತು. ಬ್ರಿಟನ್ ವೀಸಾ ಪಡೆಯಲು ಆರೋಪಿಗೆ ಅನುಕೂಲವಾಗಲೆಂದು ಶಿಕ್ಷೆ ಬಗ್ಗೆ ಆದೇಶವನ್ನು ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. [ಗುದ್ದೋಡು ಪ್ರಕರಣ: ಸಲ್ಮಾನ್ ಖಾನ್ ಇನ್ ಟ್ರಬಲ್]

ಆದರೆ, ರಾಜಸ್ಥಾನ ಹೈಕೋರ್ಟ್ ಈಗ ಸಲ್ಮಾನ್ ಖಾನ್ ಸಲ್ಲಿಸುವ ಹೊಸ ಅರ್ಜಿ(ವೀಸಾ ಪಡೆಯಲು ಅನುಮತಿ ಕೋರಿ) ಸಲ್ಲಿಸಿದ್ದನ್ನು ಮತ್ತೊಮ್ಮೆ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಹೀಗಾಗಿ ಸಲ್ಮಾನ್ ಖಾನ್ ಅವರ ಫಾರಿನ್ ಟೂರ್ ಸದ್ಯಕ್ಕಂತೂ ಸಾಧ್ಯವಿಲ್ಲ.
1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು. ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮುಂತಾದವರಿದ್ದರು.
ಎಲ್ಲರ ವಿರುದ್ಧ ರಾಜಸ್ಥಾನ ಸರ್ಕಾರ ಪ್ರಕರಣ ದಾಖಲಿಸಿಕೊಂಡಿತ್ತು. ಕೆಳ ಹಂತದ ನ್ಯಾಯಲಯದಲ್ಲಿ ಆರೋಪಿಗಳ ಆರೋಪ ಸಾಬೀತಾಗಿತ್ತು ಆದರೆ, ಮರು ವರ್ಷವೇ ಹೈಕೋರ್ಟಿನಲ್ಲಿ ತಡೆಯಾಜ್ಞೆ ಸಿಕ್ಕಿತ್ತು. ಈಗ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ಅಂತಿಮ ಹಂತ ತಲುಪಿ ತೀರ್ಪು ಹೊರಬೀಳಬೇಕಿತ್ತು. ಅದರೆ, ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ಸೂಚಿಸಿರುವುದರಿಂದ ಸದ್ಯಕ್ಕೆ ಪ್ರಕರಣದಿಂದ ಸಲ್ಲೂಗೆ ಮುಕ್ತಿ ಸಿಗುವಂತಿಲ್ಲ.












Click it and Unblock the Notifications