ಅಕ್ರಮ ಹಣ ವರ್ಗಾವಣೆ ಕೇಸ್: ಇ.ಡಿಯಿಂದ ಉದ್ಯಮಿ ಲಲಿತ್ ಬಂಧನ
ನವದೆಹಲಿ, ನವೆಂಬರ್ 17: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಉದ್ಯಮಿ ಲಲಿತ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಲಲಿತ್ ಗೋಯಲ್ರನ್ನು ಚಂಡೀಗಢದಲ್ಲಿ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಲಾಗುವುದು. ಬಳಿಕ ಇ.ಡಿ.ವಶಕ್ಕೆ ನೀಡುವಂತೆ ಕೇಳಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ.
ಉದ್ಯಮಿ ಮುಖೇಶ್ ಅಂಬಾನಿ ನಿವಾಸಕ್ಕೆ ದಿಢೀರ್ ಭದ್ರತೆ ಹೆಚ್ಚಳ: ಕಾರಣವೇನು?
ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ನಿರಂತರವಾಗಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಇ.ಡಿ.ಹೆಚ್ಚಿನ ತನಿಖೆಗಾಗಿ ಈಗ ಬಂಧಿಸಿದೆ ಎಂದು ಹೇಳಲಾಗಿದೆ. ಇದು ಸುಮಾರು 2600 ಕೋಟಿ ರೂಪಾಯಿ ವಂಚನೆ ಪ್ರಕರಣ ಎಂದು ಇ.ಡಿ.ಮೂಲಗಳಿಂತ ತಿಳಿದುಬಂದಿದೆ.
ಗೋಯಲ್ ವಿರುದ್ಧ ಇ.ಡಿ.ತನಿಖೆ ಶುರು ಮಾಡಿ, ದೇಶ ಬಿಟ್ಟು ಹೋಗದಂತೆ ಲುಕೌಟ್ ನೋಟಿಸ್ ಕೂಡ ಜಾರಿ ಮಾಡಿತ್ತು. ಆದರೂ ಕಳೆದ ಗುರುವಾರ ಹೊರಟಿದ್ದ ಲಲಿತ್ ಗೋಯಲ್ರನ್ನು ದೆಹಲಿ ಇಂದಿರಾ ಗಾಂಧಿ ಏರ್ಪೋರ್ಟ್ನಲ್ಲಿ ವಲಸೆ ಅಧಿಕಾರಿಗಳು ತಡೆದಿದ್ದರು. ಅಂದು ಇ.ಡಿ. ಈ ಬಗ್ಗೆ ಪ್ರಕಟಣೆ ಹೊರಡಿಸಿತ್ತು.
ರಿಯಲ್ ಎಸ್ಟೇಟ್ ಕಂಪನಿ ಐಆರ್ಇಒ ಪ್ರಮೋಟರ್ ಲಲಿತ್ ಗೋಯಲ್ರನ್ನು ದೆಹಲಿ ಏರ್ಪೋರ್ಟ್ನಲ್ಲಿ ವಲಸೆ ಅಧಿಕಾರಿಗಳು ತಡೆದು ನಮ್ಮ ವಶಕ್ಕೆ ನೀಡಿದ್ದಾರೆ.
ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಅವರು ಹೂಡಿಕೆದಾರರ ಹಣವನ್ನು ದುರ್ಬಳಕೆ ಮಾಡಿದ್ದಾರೆ ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ.ಹೇಳಿತ್ತು.
ಇನ್ನು ಲಲಿತ್ ಗೋಯಲ್ಗೆ ಸೇರಿದ ಹಲವು ಕಚೇರಿ, ಮನೆಗಳ ಮೇಲೆ ಕೂಡ ಇ.ಡಿ.ದಾಳಿ ನಡೆಸಿದೆ. ಅವರು ವಿಚಾರಣೆ ವೇಳೆ ಸರಿಯಾಗಿ ಸ್ಪಂದಿಸದ ಕಾರಣ ಬಂಧಿಸಲಾಗಿದೆ ಎಂದೂ ಹೇಳಲಾಗಿದೆ.
ಗೋಯಲ್ ಅವರ ಸಹೋದರಿ ಬಿಜೆಪಿ ನಾಯಕ ಸುಧಾಂಶು ಮಿತ್ತಲ್ ಅವರನ್ನು ವಿವಾಹವಾಗಿದ್ದಾರೆ. ಗ್ರಾಹಕರು ಮನೆ ಖರೀದಿಗೆ ಪಾವತಿಸಿದ್ದ ಹಣ, ಹೂಡಿಕೆಗಳು ಹಾಗೂ ಷೇರುಗಳಿಗೆ ಸಂಬಂಧಿಸಿದ ಸುಮಾರು 57.33 ಕೋಟಿ ರೂ.ವನ್ನು ಸಾಗರೋತ್ತರದಲ್ಲಿನ ಸಂಸ್ಥೆಗಳಿಗೆ ಅನ್ಯ ವಹಿವಾಟಿಗಾಗಿ ವರ್ಗಾಯಿಸಿದ್ದರು ಎನ್ನುವ ಆರೋಪವಿದೆ. ಅಕ್ರಮ ಹಣ ವರ್ಗಾವಣೆಯ ಸಾಕಷ್ಟು ಪ್ರಕರಣಗಳನ್ನು ಎದುರಿಸುತ್ತಿದ್ದರು.
ಪಂಡೋರಾ ಪೇಪರ್ಸ್ ದಾಖಲೆ ಸೋರಿಕೆಯಲ್ಲಿಯೂ ಇವರ ಹೆಸರು ಕೇಳಿಬಂದಿತ್ತು, ಆದರೆ, ಗೋಯಲ್ ಮತ್ತು ಅವರ ಕಾನೂನು ಪರಿಣಿತರ ತಂಡದ ಸದಸ್ಯರು, ಕಾಯ್ದೆ ಉಲ್ಲಂಘಿಸಿ ವಿದೇಶಗಳಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ ಎಂದು ಪ್ರತಿಪಾದಿಸಿದ್ದರು.
ಲಲಿತ್ ಗೋಯೆಲ್ ಅವರ ಐರಿಯೊ ವಂಚಿಸಿದೆ ಮತ್ತು ತಮ್ಮ ಮನೆಗಳನ್ನು ತಮ್ಮ ವಶಕ್ಕೆ ನೀಡಲಿಲ್ಲ ಎಂದು ಆರೋಪಿಸಿ ಹಲವಾರು ಮನೆ ಖರೀದಿದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಐರಿಯೊದ 2018-19 ರ ಹಣಕಾಸು ಹೇಳಿಕೆಗಳ ಪ್ರಕಾರ, ಸಂಸ್ಥೆಯು 500 ಕೋಟಿ ರೂಪಾಯಿಗಳಷ್ಟು ನಷ್ಟದಲ್ಲಿದೆ. ಲಲಿತ್ ಗೋಯೆಲ್ ಅವರ ಹೆಸರು ಇತ್ತೀಚೆಗೆ ಪಂಡೋರಾ ಸೋರಿಕೆಗಳಲ್ಲಿ ಕಾಣಿಸಿಕೊಂಡಿತು, ಇದರಲ್ಲಿ ಅವರು $ 7.7 ಕೋಟಿ ಮೌಲ್ಯದ ಆಸ್ತಿಯನ್ನು ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ಗಳಿಗೆ ಟ್ರಸ್ಟ್ ಮತ್ತು ನಾಲ್ಕು ಘಟಕಗಳ ಮೂಲಕ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೇಪರ್ ಸೋರಿಕೆಯಾದ ನಂತರ ಭಾರತ ಸರ್ಕಾರವು ಪಂಡೋರಾ ಪೇಪರ್‌ಗಳಲ್ಲಿ ಯಾರ ಹೆಸರು ಕಾಣಿಸಿಕೊಂಡಿದೆಯೋ ಅವರೆಲ್ಲರನ್ನು ತನಿಖೆ ಮಾಡಲು ತಂಡವನ್ನು ರಚಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಪ್ರಕರಣದಲ್ಲಿ ಲಲಿತ್ ಗೋಯೆಲ್ ಅವರ ಐರಿಯೊ ಕೂಡ ಇಡಿಯಿಂದ ತನಿಖೆಯಲ್ಲಿದೆ. ಲಲಿತ್ ಗೋಯೆಲ್ ಅವರು ಅಮೆರಿಕ ಮೂಲದ ಹೂಡಿಕೆ ಕಂಪನಿಗಳಿಂದ ಹಣಕಾಸು ವಂಚನೆ ಆರೋಪವನ್ನೂ ಎದುರಿಸುತ್ತಿದ್ದಾರೆ.