ಅತ್ಯಾಚಾರಿಗೆ ಶಾಕ್ ನೀಡುವ ವಿಶಿಷ್ಟ ಬ್ರಾ ಪ್ರದರ್ಶನ
ನವದೆಹಲಿ, ಜೂ. 27 : ಅತ್ಯಾಚಾರಕ್ಕೆ ಯತ್ನಿಸುವವರ ಮೇಲೆ ವಿದ್ಯುತ್ ಪ್ರವಾಹ ಹರಿಸಿ ಆಕ್ರಮಣಕ್ಕೊಳಗಾದ ಮಹಿಳೆಯನ್ನು ರಕ್ಷಿಸಲೆಂದು ರೂಪಿಸಲಾಗಿರುವ ವಿಶಿಷ್ಟ ಬಗೆಯ ಒಳಉಡುಪು (ಕಂಚುಕ) ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗುತ್ತಿರುವ 'innovation scholars in-residence' ಎಂಬ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.
20 ದಿನದ ಪ್ರದರ್ಶನದಲ್ಲಿ ವಿಶಿಷ್ಟ ಕೌಶಲ್ಯ ಬಳಸಿ ತಯಾರಿಸಲಾಗಿರುವ ಹೊಸಬಗೆಯ ಉತ್ಪನ್ನಗಳನ್ನು ಪ್ರದರ್ಶಿಸಲು ದೇಶದ ಎಲ್ಲ ಸಂಶೋಧಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಪ್ರದರ್ಶನದಲ್ಲಿ ಈ ಕಂಚುಕ ಸೇರಿದಂತೆ ಜೈವಿಕತ್ಯಾಜ್ಯವನ್ನು ಕೆಲವೇ ದಿನಗಳಲ್ಲಿ ರಾಸಾಯನಿಕ ಗೊಬ್ಬರವನ್ನಾಗಿ ಪರಿವರ್ತಿಸುವ ಸಾಧನ ಕೂಡ ಪ್ರದರ್ಶಿತವಾಗಲಿದೆ.
ಜುಲೈ 1ರಿಂದ 20ರವರೆಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಲಾಕಾರರು, ಸಂಶೋಧಕರು ರಾಷ್ಟ್ರಪತಿ ಭವನದ ಆತಿಥ್ಯ ಸ್ವೀಕರಿಸಿ, ತಮ್ಮ ಕೌಶಲ್ಯವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಎದುರಿಗೆ ಪ್ರದರ್ಶಿಸಬಹುದಾಗಿದೆ. ಇಂಥದೊಂದು ಕಾರ್ಯಕ್ರಮ ಆರಂಭವಾಗಿದ್ದು ಪ್ರಣಬ್ ಮುಖರ್ಜಿ ಅವರ ಸಮಯದಲ್ಲಿಯೆ.
ಚಂಡೀಗಢ ಮೂಲದ ವೈಮಾನಿಕ ಇಂಜಿನಿಯರ್ ಆಗಿರುವ 24 ವರ್ಷದ ಮನೀಷಾ ಮೋಹನ್ ರೂಪಿಸಿರುವ, ಅತ್ಯಾಚಾರಿಗೆ ಶಾಕ್ ನೀಡುವ ಈ ಕಂಚುಕದ ನಿರ್ಮಾಣದ ಹಿಂದೆ ಒಂದು ಕಥೆ. 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ಯುವತಿಯ ಭಯಾನಕ ಅತ್ಯಾಚಾರ ಮತ್ತು ಭೀಕರ ಹತ್ಯೆಯಿಂದ ಕನಲಿಹೋದ ಮನೀಷಾ ಈ ಬ್ರಾವನ್ನು ನಿರ್ಮಿಸಲು ನಿರ್ಧರಿಸಿದರು. [ಅತ್ಯಾಚಾರಕ್ಕೆ ಕಾರಣ ಯಾರು?]
ಇದು ಎರಡು ಪದರಗಳನ್ನು ಹೊಂದಿದ್ದು, ಮಹಿಳೆಯರನ್ನು ವಿದ್ಯುತ್ ಶಾಕ್ ನಿಂದ ರಕ್ಷಿಸುತ್ತದೆ. ಆದರೆ, ಅತ್ಯಾಚಾರಿಗೆ ಭರ್ಜರಿ ಶಾಕ್ ನೀಡಿ ಕೈಯನ್ನು ಸುಟ್ಟುಬಿಡುತ್ತದೆ. ಇದಲ್ಲದೆ, ಇದರಲ್ಲಿ ಅಳವಡಿಸಲಾಗಿರುವ ಜಿಪಿಎಸ್ ಮತ್ತು ಜಿಎಮ್ಎಸ್ ಕೋಡ್ ಬಳಸಿ ಮಹಿಳೆಯ ಪೋಷಕರಿಗೆ ಮತ್ತು ಪೊಲೀಸರಿಗೆ ಸಂದೇಶವನ್ನು ರವಾನಿಸುತ್ತದೆ. [ಲೈಂಗಿಕ ಶಿಕ್ಷಣ ಯಾಕೆಂದ ಡಾ. ಹರ್ಷ]
ಹೊಸತನವನ್ನು ಸಂಶೋಧಿಸುವ ದೇಸೀ ಪ್ರತಿಭೆಗಳ ಈ ಪ್ರದರ್ಶನದ ಮತ್ತೊಂದು ಆಕರ್ಷಣೆಯೆಂದರೆ, ರಾಜಸ್ತಾನದ ಗುರ್ಮೇಲ್ ಸಿಂಗ್ ಧೋಂಡ್ಸಿ ನಿರ್ಮಿಸಿರುವ ರಾಸಾಯನಿಕ ಗೊಬ್ಬರ ತಯಾರಿಸುವ ನವೀನಬಗೆಯ ಸಾಧನ. ಈ ಉತ್ಪನ್ನವನ್ನು ರಾಷ್ಟ್ರಪತಿ ಭವನದಲ್ಲಿ ಕೂಡ ಅಳವಡಿಸಲು ಚಿಂತಿಸಲಾಗುತ್ತಿದೆ.
ಹರ್ಯಾಣದ ಧರ್ಮವೀರ್ ಕಾಂಬೋಜ್ ರೂಪಿಸಿರುವ ಅಲೋವೆರಾ, ನೆಲ್ಲಿಕಾಯಿ ಮತ್ತಿತರ ವೈದ್ಯಕೀಯ ಗಿಡಗಳಿಂದ ರಸ ತೆಗೆಯುವ ಸಾಧನ, ಕರ್ನಾಟಕದ ಎಂಬಿ ಅವಿನಾಶ್ ಎಂಬುವವರು ರೂಪಿಸಿರುವ ತನ್ನನ್ನು ತಾನೇ ಸ್ವಚ್ಛಗೊಳಿಸುವ ಸಾಧನ, ತಮಿಳುನಾಡಿನ ಶಾಲಾ ಬಾಲಕ ಟೆನಿತ್ ಆದಿತ್ಯ ಕಂಡುಹಿಡಿದಿರುವ ಬಾಳೆಎಲೆ ವರ್ಷಗಟ್ಟಲೆ ಕೆಡದಂತೆ, ಒಣಗದಂತೆ ತಡೆಗಟ್ಟುವ ತಂತ್ರಜ್ಞಾನ ಈ ಪ್ರದರ್ಶನದಲ್ಲಿ ಪ್ರದರ್ಶಿತವಾಗಲಿದೆ.













Click it and Unblock the Notifications