14 ವರ್ಷದಲ್ಲಿ ಮೊದಲ ಬಾರಿಗೆ ರಾಜ್ ಠಾಕ್ರೆ ದೆಹಲಿಗೆ, ಸೋನಿಯಾ ಜತೆ ಚರ್ಚೆ
ನವದೆಹಲಿ, ಜುಲೈ 9: ಮಹತ್ತರವಾದ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ನವ್ ನಿರ್ಮಾಣ್ ಸೇನಾ (ಎಂಎನ್ ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸೋಮವಾರ ಭೇಟಿ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸೋನಿಯಾ ಹಾಗೂ ರಾಜ್ ಭೇಟಿ ಆಗಿದ್ದು, ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇವಿಎಂ ಬಳಕೆ ವಿಚಾರ ಹಾಗೂ ಕಾಂಗ್ರೆಸ್ ಜತೆಗಿನ ಮೈತ್ರಿ ಸಾಧ್ಯತೆ ಬಗ್ಗೆ ಕೂಡ ಚರ್ಚೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಕಳೆದ 14 ವರ್ಷದಲ್ಲಿ ರಾಜ್ ಠಾಕ್ರೆ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಮುಖ್ಯ ಚುನಾವಣೆ ಆಯುಕ್ತ ಸುನೀಲ್ ಅರೋರಾ ಅವರನ್ನು ಭೇಟಿ ಆಗಿದ್ದು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸುವಂತೆ ಒತ್ತಾಯಿಸಿದ್ದಾರೆ.

ಈ ವರ್ಷದ ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಎನ್ ಸಿಪಿ ಜತೆಗೆ ಎಂಎನ್ ಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸೋನಿಯಾ ಗಾಂಧಿ ಜತೆಗೆ ರಾಜ್ ಠಾಕ್ರೆ ಮಾತುಕತೆ ನಡೆಸಿದ್ದಾರೆ. ಸುಮಾರು ನಲವತ್ತೈದು ನಿಮಿಷಗಳ ಕಾಲ ಇವರಿಬ್ಬರ ನಡುವೆ ಚರ್ಚೆ ನಡೆಯಿತು ಎಂದು ರಾಜ್ ಆಪ್ತರು ಮಾಹಿತಿ ನೀಡಿದ್ದಾರೆ.












Click it and Unblock the Notifications