ನರೇಂದ್ರ ಮೋದಿ ನಿವಾಸದಲ್ಲಿ ಸಂಜೆ 4.30ಕ್ಕೆ ಸಂಭವನೀಯ ಕೇಂದ್ರ ಸಚಿವರ ಸಭೆ
ನವದೆಹಲಿ, ಮೇ 30: ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದು, ರಾತ್ರಿ ಏಳು ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಸಮಾರಂಭ ನಿಗದಿ ಆಗಿದೆ. ಅದಕ್ಕೂ ಮುನ್ನ ಸಂಭವನೀಯ ಹೊಸ ಸಂಪುಟ ಸಚಿವರ ಜತೆಗೆ ನರೇಂದ್ರ ಮೋದಿ ಸಂಜೆ 4.30ಕ್ಕೆ ತಮ್ಮ ನಿವಾಸದಲ್ಲಿ ಸಭೆ ನಡೆಸಲಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೋದಿ ಸಂಪುಟ ಸೇರಲಿರುವ ಸಂಸದರ ಪ್ರಾಥಮಿಕ ಪಟ್ಟಿ
ಕೇಂದ್ರ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನರೇಂದ್ರ ಮೋದಿಯೊಂದಿಗೆ ಬುಧವಾರ ಮಾತುಕತೆ ನಡೆಸಿದ್ದರು. ಆರು ಸಾವಿರ ಆಹ್ವಾನಿತರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆ ಸಕಲ ಸಿದ್ಧತೆಯೂ ನಡೆದಿದೆ. ಈ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಜರಿರುತ್ತಾರೆ.
ಕರ್ನಾಟಕದಿಂದ ಡಿ.ವಿ.ಸದಾನಂದ ಗೌಡ, ಸುರೇಶ್ ಅಂಗಡಿ, ಪ್ರಹ್ಲಾದ್ ಜೋಶಿ ಅವರು ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸುದ್ದಿ ಇದೆಯೋ ಅಂಥವರಿಗೆ ಈಗಾಗಲೇ ಕರೆ ಮಾಡಿ, ಮಾಹಿತಿ ನೀಡಲಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುನ್ನ ಸಂಭವನೀಯ ಕೇಂದ್ರ ಸಚಿವರ ಭೇಟಿ ಔಪಚಾರಿಕವಾದದ್ದು ಎನ್ನಲಾಗಿದೆ.