ರಾಷ್ಟ್ರಪತಿ ಭೇಟಿ ಮಾಡಿ ಭದ್ರತಾ ಲೋಪಗಳ ಬಗ್ಗೆ ವಿವರಣೆ ನೀಡಿದ ಮೋದಿ
ನವದೆಹಲಿ, ಜನವರಿ 06: ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನಲ್ಲಿ ಉಂಟಾದಂತಹ ಭದ್ರತಾ ಲೋಪಗಳ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ವಿವರಣೆ ನೀಡಿದ್ದಾರೆ.
Recommended Video
ಪ್ರಧಾನಿ ಹೋಗುತ್ತಿದ್ದ ವಾಹನಕ್ಕೆ ಭದ್ರತಾ ಲೋಪ ಉಂಟಾದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರಪತಿಗಳು ಈಗಾಗಲೇ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಮೋದಿ ಅವರ ಫಿರೋಜ್ ಪುರ ಭೇಟಿ ವೇಳೆ ಉಂಟಾದ ಭದ್ರತಾ ಲೋಪಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಗುರುವಾರ ರಾಷ್ಟ್ರಪತಿ ಭವನಕ್ಕೆ ತೆರಳಿ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಇನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸಹ ಪ್ರಧಾನ ಮಂತ್ರಿಗಳ ಜೊತೆ ಮಾತನಾಡಿ ಭದ್ರತಾ ಲೋಪ ಉಂಟಾಗಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಪಂಜಾಬ್ ಸರ್ಕಾರ ಆದೇಶ ನೀಡಿದ್ದು ಇನ್ನು ಮೂರು ದಿನಗಳಲ್ಲಿ ವರದಿ ಸಲ್ಲಿಕೆಯಾಗಲಿದೆ. ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ನಾಳೆ ಅರ್ಜಿ ವಿಚಾರಣೆ ನಡೆಯಲಿದೆ.
ಪಂಜಾಬ್‌ಗೆ ಹೊರಟ ಪ್ರಧಾನ ಮಂತ್ರಿಗಳನ್ನು ಅರ್ಧದಾರಿಯಲ್ಲಿ ಪ್ರತಿಭಟನಾಕಾರರು ತಡೆದು ಅವರು ದೆಹಲಿಗೆ ವಾಪಸ್ಸಾಗಿದ್ದು ದೇಶ ಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದು ಪರ-ವಿರೋಧ ಮಾತುಗಳು ಕೇಳಿಬರುತ್ತಿವೆ. ಚುನಾವಣೆ ಸನ್ನಿಹಿತವಾಗಿರುವ ಪಂಜಾಬ್‌ನಲ್ಲಿ ಇದು ರಾಜಕೀಯವಾಗಿ ಸದ್ದುಮಾಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಉಂಟಾದ ಭಾರಿ ವೈಫಲ್ಯದ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದು ಪ್ರಧಾನಿ ಮೋದಿ ಅವರ ವಿರುದ್ಧ ಪಂಜಾಬ್ ಸರ್ಕಾರ ನಡೆಸಿದ್ದ ಸಂಚು ಎಂದು ಆರೋಪಿಸಲಾಗುತ್ತಿದೆ. ಇನ್ನೊಂದೆಡೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್ ತಮ್ಮ ನಡೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಘಟನೆಯ ಬಗ್ಗೆ 'ವಿಷಾದ' ವ್ಯಕ್ತಪಡಿಸುತ್ತೇನೆ ಎಂದಿರುವ ಚನ್ನಿ, ಅಲ್ಲಿ ಯಾವುದೇ ಭದ್ರತಾ ಲೋಪ ಉಂಟಾಗಿಲ್ಲ ಎಂದು ಪ್ರತಿಪಾದಿಸಿದ್ದಾರೆ. 'ಪ್ರಧಾನಿ ಅವರನ್ನು ಕಾಪಾಡಲು ನನ್ನ ಜೀವವನ್ನೂ ಕೊಡಲು ಸಿದ್ಧನಿದ್ದೇನೆ' ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಆಗ ಯಾವುದೇ ಅಪಾಯ ಉಂಟಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ಲೋಪ ಉಂಟಾಗಿಲ್ಲ.. ಚುನಾವಣೆ ಆಗಿದ್ದರಿಂದ ಪ್ರತಿಭಟನೆ ಇತ್ತು: ಪ್ರಧಾನಿ ಭದ್ರತಾ ಲೋಪದ ಬಗ್ಗೆ ಪಂಜಾಬ್ ಸಿಎಂ ಹೇಳಿಕೆ
'ಪ್ರಧಾನಿ ಮೋದಿ ಅವರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ರಾಜಕೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ತೆರಳುತ್ತಿದ್ದರು. ಪ್ರತಿಭಟನೆ ಕಾರಣ ರಸ್ತೆ ತಡೆ ಉಂಟಾಗಿದ್ದರಿಂದ ಅವರು ಮರಳಿ ಹೋಗುವಂತೆ ಆಗಿದ್ದಕ್ಕೆ ನಾವು ವಿಷಾದಿಸುತ್ತೇವೆ. ಎಷ್ಟಾದರೂ ಅವರು ನಮ್ಮ ದೇಶದ ಪ್ರಧಾನಿ. ಅವರನ್ನು ನಾವು ಗೌರವಿಸುತ್ತೇವೆ' ಎಂದು ತಿಳಿಸಿದ್ದಾರೆ.
ಪ್ರಧಾನಿ ಅವರ ಭದ್ರತಾ ಲೋಪದ ಪ್ರಕರಣದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗಳನ್ನು ಅಮಾನತು ಮಾಡಿಲ್ಲ ಎಂದು ಚನ್ನಿ ಸ್ಪಷ್ಟಪಡಿಸಿದ್ದಾರೆ. ಫಿರೋಜ್‌ಪುರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಹರ್ಮನ್ ಹನ್ಸ್ ಅವರನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂಬ ವರದಿಗಳನ್ನು ಚನ್ನಿ ಅಲ್ಲಗಳೆದಿದ್ದಾರೆ.ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ಲೈಓವರ್‌ನಲ್ಲಿ ಸಿಲುಕಿದ್ದರು, ಬಳಿಕ ಬತಿಂಡಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ಏರ್‌ಪೋರ್ಟ್‌ಗೆ ತೆರಳಿದರು. ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ಇರುವುದೇ ಈ ವೈಫಲ್ಯಕ್ಕೆ ಕಾರಣ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳದಲ್ಲಿ ಹೆಲಿಕಾಪ್ಟರ್‌ನಲ್ಲಿ ಮೋದಿ ಆಗಮಿಸಬೇಕಿತ್ತು ಆದರೆ ವಾತಾವರಣ ಸರಿ ಇಲ್ಲದ ಕಾರಣ ಅನಿವಾರ್ಯವಾಗಿ ಕಾರಿನಲ್ಲಿ ಬರಬೇಕಾಯಿತು. ಮೆಮೋರಿಯಲ್‌ನಿಂದ 30 ಕಿ.ಮೀ ದೂರದಲ್ಲಿ ಫ್ಲೈಓವರ್ ಮೇಲೆ ಕಾನ್‌ವಾಯ್ ಬರುತ್ತಿದ್ದಂತೆ ಪ್ರತಿಭಟನಾಕಾರರು ಸುತ್ತುವರೆದರು.
ಮೋದಿ ಬರುವ ಕುರಿತು ಪಂಜಾಬ್ ಸರ್ಕಾರಕ್ಕೆ ಮೊದಲೇ ತಿಳಿಸಲಾಗಿತ್ತು. ಆದರೂ ಈ ರೀತಿ ಘಟನೆ ನಡೆದಿದೆ, ಈ ಕುರಿತು ಗೃಹ ಸಚಿವಾಲಯ ಪಂಜಾಬ್ ಸರ್ಕಾರದ ಬಳಿ ವರದಿ ಕೇಳಿದೆ.ಹವಾಮಾನ ಸ್ಥಿತಿ ಸುಧಾರಿಸದ ಕಾರಣ, ಅವರು ರಸ್ತೆ ಮೂಲಕವೇ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದರು, ಅದಕ್ಕೆ ಸುಮಾರು 2 ಗಂಟೆಗೂ ಅಧಿಕ ಸಮಯ ಹಿಡಿಯುತ್ತಿತ್ತು.ಪಂಜಾಬ್ ಪೊಲೀಸ್ ಡಿಜಿಪಿ ಅವರಿಂದ ಅಗತ್ಯ ಭದ್ರತಾ ಏರ್ಪಾಡುಗಳನ್ನು ಖಾತ್ರಿಪಡಿಸಿಕೊಂಡ ನಂತರ ಅವರು ರಸ್ತೆ ಮೂಲಕ ಪ್ರಯಾಣ ಆರಂಭಿಸಿದರು.












Click it and Unblock the Notifications