ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: ಕೆರಳಿ ಕೆಂಡವಾದ ಸಿಎಂ ಕೇಜ್ರಿವಾಲ್!
ದೆಹಲಿ, ನವೆಂಬರ್.11: ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಅಂತಾರಲ್ವಾ. ರಾಷ್ಟ್ರ ರಾಜಧಾನಿ ಮಂದಿಯ ಪರಿಸ್ಥಿತಿ ಈಗ ಹಾಗೆ ಆಗಿದೆ. ಯಾರೋ ಮಾಡುತ್ತಿರುವ ತಪ್ಪಿಗೆ ದೆಹಲಿಯ ಜನರು ನಿತ್ಯ ನರಕಯಾತನೆ ಅನುಭವಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
ದೆಹಲಿಯಲ್ಲಿ ವಾತಾವರಣ ದಿನೇ ದಿನೆ ಹದಗೆಡುತ್ತಿದೆ. ಮನೆಯಿಂದ ಹೊರ ಬರೋದಕ್ಕೂ ಮೊದಲೇ ಜನರು ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕಾದ ದುಸ್ಥಿತಿ ಎದುರಾಗಿದೆ. ನೆರೆ ರಾಜ್ಯಗಳು ಮಾಡುತ್ತಿರುವ ಕೆಲಸದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಕೆರಳಿ ಕೆಂಡವಾಗಿದ್ದಾರೆ.
ಗುಜರಾತ್ ಹಾಗೂ ಹರಿಯಾಣ ರಾಜ್ಯಗಳ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ಫುಲ್ ಗರಂ ಆಗಿದ್ದಾರೆ. ನೀವು ಬೆಳೆಗಳನ್ನು ಸುಡುವುದರಿಂದ ದೆಹಲಿ ಪ್ರಜೆಗಳು ನಿತ್ಯ ನರಳುವಂತಾಗಿದೆ. ಎರಡು ರಾಜ್ಯಗಳಲ್ಲಿ ಬೆಳೆಗಳನ್ನು ಸುಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಕೇಜ್ರಿವಾಲ್ ಖಡಕ್ ಆಗಿ ಹೇಳಿದ್ದಾರೆ.

ಎರಡು ಸರ್ಕಾರಗಳ ವಿರುದ್ಧು ಕೇಜ್ರಿ ಗುಡುಗು
ದೆಹಲಿಯಲ್ಲಿ ಸೃಷ್ಟಿಯಾಗಿರುವ ವಾಯುಮಾಲಿನ್ಯದ ಬಗ್ಗೆ ಸ್ವತಃ ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿತ್ತು. ಗುಜರಾತ್ ಹಾಗೂ ಹರಿಯಾಣದಲ್ಲಿ ಬೆಳೆ ಸುಡುವುದನ್ನು ನಿಲ್ಲಿಸುವಂತೆ ಕಳೆದ ವಾರವೇ ಖಡಕ್ ಸಂದೇಶವನ್ನೂ ನೀಡಿತ್ತು. ಆದರೆ, ದೇಶದ ಉನ್ನತ ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಎರಡು ರಾಜ್ಯಗಳಲ್ಲಿ ಬೆಳೆಗಳನ್ನು ಸುಡುವ ಪ್ರಕ್ರಿಯೆ ಮತ್ತೆ ಶುರುವಾಗಿದೆೆ.

ದೆಹಲಿ ಮಂದಿಗೆ ಪ್ರಾಣ ಸಂಕಟ
ಹರಿಯಾಣದಲ್ಲಿ ಹಾಗೂ ಪಂಜಾಬ್ ನಲ್ಲಿ ರೈತರು ಬೆಳೆದ ಬೆಳೆಯನ್ನು ಸುಟ್ಟರಷ್ಟೇ ಮುಂದಿನ ಬೆಳೆ ಬೆಳೆಯಲು ಸಾಧ್ಯ. ಹೀಗೆ ಬೆಳೆಯನ್ನು ಸುಡುವುದು ರೈತರಿಗೆ ಒಂದು ರೀತಿಯ ಅನಿವಾರ್ಯವೂ ಹೌದು. ಆದರೆ, ಎರಡು ರಾಜ್ಯಗಳಲ್ಲಿ ನಡೆಯುತ್ತಿರುವ ಈ ಆಟಕ್ಕೆ, ದೆಹಲಿ ಜನರು ಹೈರಾಣು ಆಗುತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯದಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ವಿರುದ್ಧ ಕೇಜ್ರಿವಾಲ್ ಕಿಡಿ
ಬಾನುವಾರದಂದು ಪಂಜಾಬ್ ನಲ್ಲಿ ರೈತರು ತಮ್ಮ ಬೆಳೆಯನ್ನು ಸುಟ್ಟಿದ್ದಾರೆ. ಮಟ ಮಟ ಮಧ್ಯಾಹ್ನ 12 ಗಂಟೆ ವೇಳೆಗೆ ಈ ಘಟನೆ ನಡೆದಿದ್ದರೂ ಪಂಜಾಬ್ ಮುಖ್ಯಮಂತ್ರಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸುಪ್ರೀಂಕೋರ್ಟ್ ಆದೇಶವೂ ಇವರಿಗೆ ಲೆಕ್ಕಕ್ಕಿಲ್ಲವೇ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದ್ದಾರೆ.

ಉಸಿರಾಟ, ಶ್ವಾಸಕೋಶ ಸಮಸ್ಯೆಗೆ ತುತ್ತಾಗುವ ಭೀತಿಯಲ್ಲಿ ಜನ
ಕಳೆದ ಎರಡು ಮೂರು ದಿನಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಇಂದು ಮತ್ತೆ ವಾತಾವರಣ ಹದಗೆಟ್ಟು ಹೋಗಿದೆ. ವಾಯು ಮಾಲಿನ್ಯದಿಂದ ಗಾಳಿ ಗುಣಮಟ್ಟ ಮತ್ತಷ್ಟು ಹಾಳಾಗಿರುವ ಬಗ್ಗೆ ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಆಂಡ್ ವೆದರ್ ಫಾರಕಾಸ್ಟಿಂಗ್ ಆಂಡ್ ರಿಸರ್ಚ್ ತಿಳಿಸಿದೆ. ಅಲ್ಲದೇ ಜನರಲ್ಲಿ ವಾಯುಮಾಲಿನ್ಯದಿಂದ ಉಸಿರಾಟ ತೊಂದರೆ, ಶ್ವಾಸಕೋಶದ ಸಮಸ್ಯೆ ಹಾಗೂ ಹೃದಯಾಘಾತದ ಭೀತಿಯನ್ನು ಎದುರಿಸುತ್ತಿದ್ದಾರೆ.












Click it and Unblock the Notifications