ಪ್ರತಿಪಕ್ಷಗಳ ಇವಿಎಂ ಗಲಾಟೆಗೆ ಪ್ರಧಾನಿ ಬೇಸರ
ನವದೆಹಲಿ, ಮೇ 22: ಪ್ರತಿಪಕ್ಷಗಳ ಇವಿಎಂ ಗಲಾಟೆ ಕುರಿತು ಪ್ರಧಾನಿ ನರೇಂದ್ರ ಮೋದಿ ಬೇಸರ ಹೊರಹಾಕಿದ್ದಾರೆ.
ಎನ್‌ಡಿಎ ನಾಯಕರ ಔತಣ ಕೂಟದಲ್ಲಿ ಅನೌಪಚಾರಿಕವಾಗಿ ಮಾತನಾಡಿದ ಮೋದಿ ಇವಿಎಂ ಕುರಿತು ಪ್ರತಿಪಕ್ಷಗಳು ಅನವಶ್ಯಕ ವಿವಾದ ಸೃಷ್ಟಿಸುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ವಿಚಾರವನ್ನು ಸಭೆಯ ಬಳಿಕ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಚುನಾವಣೆ ಆರಂಭದಿಂದಲೂ ಪ್ರತಿಪಕ್ಷಗಳು ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಧ್ವನಿ ಎತ್ತುತ್ತಿದ್ದವು. ಈಗ ಮತದಾನೋತ್ತರ ಸಮೀಕ್ಷೆ ಬಳಿಕ ಪ್ರತಿಪಕ್ಷಗಳ ಇವಿಎಂ ಗಲಾಟೆ ಇನ್ನಷ್ಟು ಜೋರಾಗಿದೆ.

ಇವಿಎಂ ದುರ್ಬಳಕೆ ಕಾರಣದಿಂದಲೇ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಎಂದು ಬಿಂಬಿಸಲು ಪ್ರತಿಪಕ್ಷಗಳು ಮುಂದಾಗಿವೆ.
ಸುಪ್ರೀಂಕೋರ್ಟ್, ಚುನಾವಣಾ ಆಯೋಗ ಹಾಗೂ ತಜ್ಞರು ಈ ಬಗ್ಗೆ ಸಾಕಷ್ಟು ಸ್ಪಷ್ಟನೆ ನೀಡಿದರೂ ಪ್ರತಿಪಕ್ಷಗಳು ಅಪಪ್ರಚಾರದಿಂದ ಹಿಂದೆ ಸರಿಯುತ್ತಿಲ್ಲ. ಇವಿಎಂ ವಿಚಾರವಲ್ಲದೆ ಎನ್‌ಡಿ ಸರ್ಕಾರದ ಮುಂದಿನ ಐದು ವರ್ಷಗಳ ಗುರಿಗಳ ಬಗ್ಗೆ ಸಂಕ್ಷಿಪ್ತ ಚರ್ಚೆ ಕೂಡ ಎನ್‌ಡಿಎ ಸಭೆಯಲ್ಲಿ ನಡೆದಿದೆ.
ಇದಕ್ಕೂ ಮುನ್ನ ಬಿಜೆಪಿ ಸಚಿವರ ಸಭೆಯಲ್ಲಿ ಮಾತನಾಡಿದ್ದ ಮೋದಿ ಈ ಬಾರಿಯ ಚುನಾವಣಾ ಪ್ರಚಾರವನ್ನು ಬಿಜೆಪಿ ಮಾತ್ರ ನಡೆಸಿದೆ.
ದೇಶದ ಜನರು ಈ ಸರ್ಕಾರದ ಪುನರ್ ಆಯ್ಕೆ ಬಯಸಿ ತಾವೇ ಪ್ರಚಾರ ನಡೆಸಿದ್ದಾರೆ. ಈ ಬಾರಿಯ ಚುನಾವಣಾ ಪ್ರಚಾರ ನನ್ನ ಪಾಲಿಗೆ ಯಾತ್ರೆ ಎಂದು ಸಂತಸ ವ್ಯಕ್ತಪಡಿಸಿದ್ದರು.












Click it and Unblock the Notifications