ಕಾಬೂಲ್‌ನಲ್ಲಿ ಸಿಲುಕಿದ್ದಾರೆ 200ಕ್ಕೂ ಅಧಿಕ ಭಾರತೀಯರು
ನವದೆಹಲಿ, ಆಗಸ್ಟ್ 16; ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ವಿವಿಧ ದೇಶಗಳಲ್ಲಿ ಆತಂಕ ಮೂಡಿಸಿದೆ. ದೇಶದಲ್ಲಿ ಸಿಲುಕಿರುವ ತನ್ನ ನಾಡಿನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಸರ್ಕಾರಗಳು ಪ್ರಯತ್ನವನ್ನು ನಡೆಸುತ್ತಿವೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿವಿಧ ದೇಶಗಳ ಸಾವಿರಾರು ಜನರು ವಿಮಾನಕ್ಕಾಗಿ ಕಾಯುತ್ತಿದ್ದಾರೆ.
ಭಾನುವಾರವೇ ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್ ವಶಕ್ಕೆ ಪಡೆದುಕೊಂಡಿದ್ದಾರೆ. 126 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾನುವಾರ ಕಾಬೂಲ್‌ನಿಂದ ನವದೆಹಲಿಗೆ ಬಂದಿದೆ. ಈಗ ಅಫ್ಘಾನಿಸ್ತಾನಕ್ಕೆ ವಿಮಾನ ಹಾರಾಟವನ್ನು ನಡೆಸಲು ವಿವಿಧ ದೇಶಗಳು ಸಿದ್ಧವಿಲ್ಲ.
ಅಫ್ಘಾನಿಸ್ತಾನದಲ್ಲಿ ಸುಮಾರು 200 ಜನ ಭಾರತೀಯರು ಇನ್ನೂ ಇದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇವರಲ್ಲಿ ವಿದೇಶಾಂಗ ಇಲಾಖೆಯ ಉದ್ಯೋಗಿಗಳು ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿಗಳು ಸಹ ಸೇರಿದ್ದಾರೆ. ಎಲ್ಲರೂ ಕಾಬೂಲ್‌ನಲ್ಲಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿಮಾನವಿದೆ. ಆದರೆ ಕಾಬೂಲ್‌ನ ಇಂಡಿಯನ್ ಮಿಷನ್ ಕಾಪೌಂಡ್‌ನಲ್ಲಿರುವ ಭಾರತೀಯರನ್ನು ವಿಮಾನ ನಿಲ್ದಾಣಕ್ಕೆ ಕರೆತರುವುದು ಹೇಗೆ? ಎಂಬುದ ಸದ್ಯದ ಪ್ರಶ್ನೆಯಾಗಿದೆ. ತಾಲಿಬಾನಿಗಳು ನಗರದಲ್ಲಿ ಕರ್ಫ್ಯೂ ಹೇರಿದ್ದಾರೆ.
ಕಾಬೂಲ್‌ನಲ್ಲಿ ಸಿಲುಕಿರುವ ಜನರಲ್ಲಿ 100 ಜನರು ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಾಗಿದ್ದಾರೆ. ಭಾರತೀಯ ರಾಯಭಾರ ಕಚೇರಿ ಸೇರಿದಂತೆ ವಿವಿಧ ಕಡೆ ಭದ್ರತೆಗಾಗಿ ಇವರು ನಿಯೋಜನೆಗೊಂಡಿದ್ದರು. ಭಾನುವಾರ ರಾತ್ರಿಯಿಂದ ಅಫ್ಘಾನಿಸ್ತಾನದಲ್ಲಿ ವಾಣಿಜ್ಯ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಅಫ್ಘಾನಿಸ್ತಾನ ತೊರೆಯಲು ಸಾವಿರಾರು ಜನರು ತಯಾರಾಗಿದ್ದಾರೆ. ಎಲ್ಲರೂ ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಸಾವಿರಾರು ಜನರು ಜಮಾವಣೆಗೊಂಡಿದ್ದಾರೆ. ಭಾರತೀಯರನ್ನು ವಾಪಸ್ ಕರೆಸಲು ವಿದೇಶಾಂಗ ಇಲಾಖೆ ಮಾತುಕತೆಯನ್ನು ನಡೆಸುತ್ತಿದೆ. ಆದರೆ ಇನ್ನೂ ಅಂತಿಮ ಒಪ್ಪಿಗೆ ಸಿಕ್ಕಿಲ್ಲ.
ಕಳೆದ 3-4 ದಿನಗಳಲ್ಲಿ ಅಫ್ಘಾನಿಸ್ತಾನ ಪರಿಸ್ಥಿತಿ ಎಲ್ಲರಿಗೂ ತಿಳಿದಿತ್ತು. ಆದರೆ ವಿದೇಶಾಂಗ ಇಲಾಖೆ ಸೇರಿದಂತೆ ಇತರ ಕಡೆ ಇರುವ ಭಾರತೀಯರನ್ನು ಏಕೆ ರಕ್ಷಣೆ ಮಾಡಿ ವಾಪಸ್ ಕರೆಸಲಿಲ್ಲ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಹಿಂಸಾಚಾರ ನಡೆಸಬಹುದು ಎಂಬ ಆತಂಕದಲ್ಲಿ ಜನರು ದೇಶವನ್ನು ಬಿಟ್ಟು ಬರಲು ಪ್ರಯತ್ನ ನಡೆಸುತ್ತಿದ್ದಾರೆ.
ಭಾನುವಾರ ಸಂಜೆಯೇ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಕಾಬೂಲ್‌ನಿಂದ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಅಧ್ಯಕ್ಷರ ನಿವಾಸ ತಮ್ಮ ವಶದಲ್ಲಿದೆ ಎಂದು ಕಾಬೂಲ್‌ನಲ್ಲಿರುವ ತಾಲಿಬಾನ್‌ನ ಇಬ್ಬರು ಹಿರಿಯ ಕಮಾಂಡರ್‌ಗಳು ಘೋಷಣೆ ಮಾಡಿದ್ದಾರೆ. ಆದರೆ ಅಧ್ಯಕ್ಷರು ಎಲ್ಲಿದ್ದಾರೆ ಎಂದು ಭದ್ರತಾ ಕಾರಣಗಳಿಗಾಗಿ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಅವರ ಕಚೇರಿ ಹೇಳಿದೆ.
ಕಾಬೂಲ್‌ಗೆ ಸಂಚಾರ ನಡೆಸುವ ಎಲ್ಲಾ ವಿಮಾನಗಳನ್ನು ಪಾಕಿಸ್ತಾನ ರದ್ದುಗೊಳಿಸಿದೆ. ಭದ್ರತಾ ಪರಿಸ್ಥಿತಿ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ವಕ್ತಾರಅ ಅಬ್ದುಲ್ಲಾ ಹಫೀಜ್ ಹೇಳಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿವಿಧ ದೇಶಗಳ ಸಾವಿರಾರು ಜನರು ಸೇರಿದ್ದಾರೆ. ವಿವಿಧ ದೇಶಗಳ ರಾಯಭಾರ ಕಚೇರಿಗಳು ತಮ್ಮ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳಲು ಪ್ರಯತ್ನವನ್ನು ನಡೆಸುತ್ತಿದ್ದಾರೆ.
ಭಾನುವಾರ ರಾತ್ರಿ 126 ಪ್ರಯಾಣಿಕರನ್ನು ಹೊತ್ತ ವಿಮಾನ ಕಾಬೂಲ್‌ನಿಂದ ನವದೆಹಲಿಗೆ ಬಂದು ತಲುಪಿದೆ. ಬಳಿಕ ಕಾಬೂಲ್‌ನಿಂದ ವಾಣಿಜ್ಯ ವಿಮಾನಗಳು ಸಂಚಾರವನ್ನು ನಡೆಸುತ್ತಿಲ್ಲ. ಸೋಮವಾರ ಬೆಳಗ್ಗೆ ತಾಲಿಬಾನಿಗಳು ವಿಮಾನ ನಿಲ್ದಾಣದ ಬಳಿ ಗುಂಡಿನ ದಾಳಿಯನ್ನು ನಡೆಸಿದ್ದು, ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಭಾರತ ಅವಲೋಕಿಸುತ್ತಿದೆ. ಕಾಬೂಲ್‌ನಲ್ಲಿರುವ ಸಿಲುಕಿರುವ ಭಾರತೀಯರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications