ಒಂದು ದೇಶ, ಒಂದು ರೇಷನ್ ಕಾರ್ಡ್: ರಾಜ್ಯಗಳಿಗೆ ಒಂದು ವರ್ಷದ ಗಡುವು
ನವದೆಹಲಿ, ಜೂನ್ 29: 'ಒಂದು ದೇಶ, ಒಂದು ಪಡಿತರ ಚೀಟಿ' ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 2020ರ ಜೂನ್ 30ರವರೆಗೂ ಒಂದು ವರ್ಷದ ಗಡುವು ನೀಡಿದೆ.
ಈ ವ್ಯವಸ್ಥೆಯಡಿ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ದೇಶದ ಯಾವುದೇ ಭಾಗದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಬ್ಸಿಡಿದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಬಹುದಾಗಿದೆ.
ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ತೆಲಂಗಾಣ ಮತ್ತು ತ್ರಿಪುರಾ ಸೇರಿ ಒಟ್ಟು ಹತ್ತು ರಾಜ್ಯಗಳು ಈಗಾಗಲೇ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಒದಗಿಸುತ್ತಿವೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದರು.

'ಮುಂಬರುವ 2020ರ ಜೂನ್ 30ರ ವೇಳೆಗೆ ಇಡೀ ದೇಶದಲ್ಲಿ ತಪ್ಪದೇ ಒಂದು ದೇಶ, ಒಂದು ರೇಷನ್ ಕಾರ್ಡ್ ವ್ಯವಸ್ಥೆಯನ್ನು ಅಳವಡಿಸಬೇಕು. ಈ ವ್ಯವಸ್ಥೆಯ ತ್ವರಿತ ಅನುಷ್ಠಾನಕ್ಕೆ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದೇವೆ' ಎಂದು ಅವರು ಹೇಳಿದರು.
ಒಂದು ಕುಟುಂಬ ಅಥವಾ ವ್ಯಕ್ತಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಾಸ ಸ್ಥಳ ಬದಲಿಸಿದರೂ ಯಾವ ಬಡವರೂ ಪಿಡಿಎಸ್ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಹೊಂದಿದೆ. ಅಲ್ಲದೆ, ನಕಲಿ ಪಡಿತರ ಚೀಟಿದಾರರನ್ನು ಪಟ್ಟಿಯಿಂದ ಹೊರಹಾಕಲು ಸಹ ಇದು ನೆರವಾಗುತ್ತದೆ ಎಂದು ತಿಳಿಸಿದರು.
ತಮಿಳುನಾಡು, ಪಂಜಾಬ್, ಒಡಿಶಾ ಮತ್ತು ಮಧ್ಯಪ್ರದೇಶ ಸೇರಿದಂತೆ 11 ರಾಜ್ಯಗಳಲ್ಲಿ ಪಿಡಿಎಸ್ ಸೌಲಭ್ಯವನ್ನು ಸುಲಭವಾಗಿ ಜಾರಿಗೊಳಿಸಬಹುದು. ಈ ರಾಜ್ಯಗಳಲ್ಲಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿಯೂ ಪಾಯಿಂಟ್ ಆಫ್ ಸೇಲ್ (ಪಿಓಎಸ್) ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಮೋದಿ ಅವರ 2.0 ಸರ್ಕಾರದ 100 ದಿನಗಳ ಅಜೆಂಡಾದಲ್ಲಿ ಇದೂ ಒಂದಾಗಿದೆ ಎಂದು ತಿಳಿಸಿದರು.












Click it and Unblock the Notifications