'ಒಂದು ದೇಶ, ಒಂದು ಚುನಾವಣೆ' ಹೊಸ ಪರಿಕಲ್ಪನೆಗೆ ಬಿಜೆಪಿ ಬದ್ಧ!
ನವದೆಹಲಿ, ಮಾರ್ಚ್ 01: 'ಒಂದು ದೇಶ, ಒಂದು ಚುನಾವಣೆ' ಎಂಬ ಹೊಸ ಪರಿಕಲ್ಪನೆಯನ್ನು ಜಾರಿಗೆ ತರಲು ಉತ್ಸುಕವಾಗಿರುವ ಬಿಜೆಪಿ ತನ್ನ ಪಕ್ಷದ ಎಲ್ಲಾ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಭೆಯನ್ನು ನಿನ್ನೆ(ಫೆ.28) ದೆಹಲಿಯಲ್ಲಿ ಆಯೋಜಿಸಿತ್ತು.
ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ವಿತ್ತ ಸಚಿವ ಅರುಣ್ ಜೇಟ್ಲಿ, ಗೃಹಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮುಂತಾದ ಮುಖಂಡರು ಭಾಗವಹಿಸಿದ್ದರು.
ದೇಶದಲ್ಲಿ ಒಂದೊಂದು ರಾಜ್ಯದಲ್ಲೂ ಒಂದೊಂದು ಬಾರಿ ಚುನಾವಣೆ ನಡೆಯುತ್ತದೆ. ಇದರಿಂದ ಪ್ರಗತಿ ಸಾಧ್ಯವಾಗುತ್ತಿಲ್ಲ. ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಲೇ ಇರುವುದರಿಂದ ಯಾವಾಗಲೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಂತಾಗಿದೆ. ಇದರಿಂದಾಗಿ ಅಭಿವರದ್ಧಿಪರ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂಬುದು ಬಿಜೆಪಿ ನಾಯಕರ ಅಂಬೋಣ.

ವಿಧಾನಸಭೆ ಚುನಾವಣೆಗಳ ಜೊತೆಯಲ್ಲೇ ಲೋಕಸಭೆ ಚುನಾವಣೆಯನ್ನೂ ನಡೆಸುವುದರಿಂದ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು. ಇದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವೆ ಹೆಚ್ಚು ಸಹಕಾರ, ಬಾಂಧವ್ಯ ಬೆಳೆಯಲು ಸಾಧ್ಯ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.
ಸಭೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Click it and Unblock the Notifications