ಭಾರತ ಒಂದಿಂಚು ಭೂಮಿಯನ್ನೂ ಕಳೆದುಕೊಂಡಿಲ್ಲ; ಸೇನಾ ಮುಖ್ಯಸ್ಥ
ನವದೆಹಲಿ, ಮಾರ್ಚ್ 30: ಭಾರತ ಮತ್ತು ಚೀನಾ ಗಡಿ ವಿವಾದದ ಕುರಿತು ಮತ್ತೊಮ್ಮೆ ಪ್ರಸ್ತಾಪಿಸಿರುವ ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ, ಭಾರತ ಒಂದು ಇಂಚು ಭೂಮಿಯನ್ನೂ ಕಳೆದುಕೊಂಡಿಲ್ಲ ಎಂದು ಹೇಳಿದ್ದಾರೆ.
"ನಾವು ಈ ವಿವಾದದಲ್ಲಿ ನಮ್ಮ ಭೂಪ್ರದೇಶವನ್ನು ಕಳೆದುಕೊಂಡಿಲ್ಲ. ಈ ವಿವಾದ ಆರಂಭವಾಗುವಾಗ ಪರಿಸ್ಥಿತಿ ಹೇಗಿತ್ತೋ ಈಗಲೂ ಹಾಗೇ ಇದೆ. ನಮ್ಮ ಒಂದಿಂಚು ಭೂಮಿಯನ್ನೂ ನಾವು ಕಳೆದುಕೊಂಡಿಲ್ಲ" ಎಂದು ಹೇಳಿದ್ದಾರೆ.
ಭಾರತ-ಚೀನಾ ನಡುವೆ ಯುದ್ಧ ನಡೆಯುವುದಿಲ್ಲ ಎಂಬ ನಂಬಿಕೆ ಇದೆ: ಅಮೆರಿಕ
ಲಡಾಖ್‌ನ ಪ್ಯಾಂಗಾಂಗ್ ಸರೋವರದಲ್ಲಿ ನಿಯೋಜಿಸಿದ್ದ ಸೇನೆಯನ್ನು ಕಳೆದ ತಿಂಗಳು ಭಾರತ ಹಾಗೂ ಚೀನಾ ವಾಪಸ್ ಕರೆದುಕೊಂಡಿತ್ತು. ಜೊತೆಗೆ ದೇಪ್‌ಸಾಂಗ್, ಹಾಟ್ ಸ್ಪ್ರಿಂಗ್ ಹಾಗೂ ಗೋಗ್ರಾದಲ್ಲಿಯೂ ಇದೇ ಬೆಳವಣಿಗೆಯನ್ನು ನಿರೀಕ್ಷಿಸಲಾಗಿತ್ತು.
ಕಳೆದ ಏಪ್ರಿಲ್‌ನಲ್ಲಿ ಲಡಾಖ್ ಸಮೀಪ ಚೀನಾ ಸೇನೆ ಗಡಿ ನಿಯಂತ್ರಣ ರೇಖೆಯಿಂದ ಒಳನುಸುಳಿತ್ತು. ಜೂನ್ 15ರಂದು ಈ ವಿವಾದದ ಸಂಬಂಧ ನಡೆದ ಘರ್ಷಣೆಯಲ್ಲಿ 20 ಯೋಧರು ಪ್ರಾಣ ತೆತ್ತಿದ್ದರು. ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿದ್ದ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ಉಭಯ ರಾಷ್ಟ್ರಗಳ ಸೇನೆ ಕಮಾಂಡರ್‌ಗಳ ನಡುವೆ ಮಾತುಕತೆ ನಡೆದಿತ್ತು. ಈ ಮಾತುಕತೆ ಬಳಿಕ, ಗಡಿಯಲ್ಲಿ ಸೇನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ನಿರ್ಧಾರ ಮಾಡಿರುವುದಾಗಿ ವರದಿಯಾಗಿತ್ತು.