ಸಬ್ಸಿಡಿ ರಹಿತ ಎಲ್ಪಿಜಿ ದರ 220 ರೂ. ಹೆಚ್ಚಳ

ಅಂತಾರಾಷ್ಟ್ರೀಯವಾಗಿ ದರಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬುಧವಾರ ಆದೇಶ ಹೊರಡಿಸಿರುವ ಸರ್ಕಾರ ಸಬ್ಸಿಡಿಯೇತರ ಎಲ್ಪಿಜಿ ಬೆಲೆಯನ್ನು ಹೆಚ್ಚಿಸಿದೆ ಎಂದು ಹೇಳಿದೆ. ನೂತನ ದರದಂತೆ ನವದೆಹಲಿಯಲ್ಲಿ 14.2 ತೂಕದ ಸಿಲಿಂಡರ್ ಬೆಲೆ 1,021 ರೂ.ಗಳಿಂದ 1,241 ರೂ.ಗೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 1267 ರೂ. ಆಗಿದೆ. [ಆಟೋ ಗ್ಯಾಸ್ ದರ ಹೆಚ್ಚಳ]
ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಸರ್ಕಾರ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ. ಡಿಸೆಂಬರ್ 1ರಂದು 63 ರೂ, ಡಿಸೆಂಬರ್ 11ರಂದು 3.50 ರೂ. ಹೆಚ್ಚಳ ಮಾಡಿತ್ತು. ಸದ್ಯ ಸಬ್ಸಿಡಿಯೇತರ ಸಿಲಿಂಡರ್ ದರವನ್ನು ಏಕಾಏಕಿ 220 ರೂ. ಏರಿಕೆ ಮಾಡಲಾಗಿದೆ. [ಸಿಲಿಂಡರ್ ಬೆಲೆ ಹೆಚ್ಚಳ]
ಸರ್ಕಾರ ನೀಡುವ ಸಬ್ಸಿಡಿ ಅನ್ವಯ ಗ್ರಾಹಕರು ವಾರ್ಷಿಕ ಒಂಭತ್ತು ಸಿಲಿಂಡರ್ ಪಡೆಯಬಹುದು. ನಂತರ ಗೃಹ ಬಳಕೆ ಸಿಲಿಂಡರ್ ಅಗತ್ಯವಿದ್ದರೆ, ಮಾರುಕಟ್ಟೆ ದರ ನೀಡಿ ಪಡೆಯಬೇಕಾಗುತ್ತದೆ. ತೈಲ ಕಂಪನಿಗಳು ಸಬ್ಸಿಡಿಯೇತರ ಸಿಲಿಂಡರ್ ದರವನ್ನು ಪ್ರತಿ ತಿಂಗಳು ಪರಿಷ್ಕರಿಸುತ್ತವೆ. ಅಂತಾರಾಷ್ಟ್ರೀಯ ದರಗಳಿಗೆ ಅನ್ವಯವಾಗುವಂತೆ ದರಗಳ ಏರಿಕೆ ಮತ್ತು ಇಳಿಕೆ ಯಾಗುತ್ತದೆ.
ವೈಮಾನಿಕ ಇಂಧನ ದರ ಏರಿಕೆ : ಆಟೋ, ಎಲ್ಪಿಜಿ ದರದ ಜೊತೆಗೆ ವಿಮಾನ ಇಂಧನ ದರವನ್ನು ಶೇ.2.74ರಷ್ಟು ಏರಿಕೆ ಮಾಡಲಾಗಿದೆ. ನವದೆಹಲಿಯಲ್ಲಿ ಎಟಿಎಫ್ ಬೆಲೆಯಲ್ಲಿ 2,036.59 ರೂ.ನಷ್ಟು ದುಬಾರಿಯಾಗಿದ್ದು, ಪ್ರತಿ ಕಿಲೋಲೀಟರ್ ದರ 76,241.33 ರೂ.ಗೆ ಹೆಚ್ಚಳವಾಗಿದೆ.
ವಿಮಾನಗಳ ಕಾರ್ಯಾಚರಣೆಯ ಒಟ್ಟು ವೆಚ್ಚದಲ್ಲಿ ಶೇ.40ರಷ್ಟು ಖರ್ಚು ಇಂಧನಕ್ಕೆ ತಗುಲುತ್ತದೆ. ವೈಮಾನಿಕ ಇಂಧನ ದರ ಏರಿಕೆ ಆಗಿರುವುದು ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳಿಗೆ ಮತ್ತಷ್ಟು ಹೊರೆಯಾಗಲಿದೆ. ಆದ್ದರಿಂದ ವಿಮಾನ ಸಂಚಾರದ ದರವೂ ಶೀಘ್ರದಲ್ಲೇ ಹೆಚ್ಚಳವಾಗುವ ಸಾಧ್ಯತೆ ಇದೆ.


Click it and Unblock the Notifications
