ಪುತ್ರಿಯ ಸಾವಿನ ನ್ಯಾಯಕ್ಕಾಗಿ ಸುಪ್ರೀಂಗೆ ನಿರ್ಭಯ ತಾಯಿ ಅರ್ಜಿ
ನವದೆಹಲಿ, ಫೆಬ್ರವರಿ 12 : ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಹೊಸ ಡೆತ್ ವಾರೆಂಟ್ ನೀಡಬೇಕು ಎಂದು ನಿರ್ಭಯ ತಾಯಿ ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ನಾಲ್ವರು ಅಪರಾಧಿಗಳ ಮರಣದಂಡನೆ ಶಿಕ್ಷೆ ವಿಳಂಬವಾಗುತ್ತಲೇ ಇದೆ.
2012ರಲ್ಲಿ ನಿರ್ಭಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು, ಬಳಿಕ ಆಕೆ ಮೃತಪಟ್ಟಿದ್ದಳು. ನಿರ್ಭಯ ತಾಯಿ ಆಶಾದೇವಿ ಅಂದಿನಿಂದಲೂ ಪುತ್ರಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಹೋರಾಟಡುತ್ತಲೇ ಇದ್ದಾರೆ.
ತಿಹಾರ್ ಜೈಲಿನಲ್ಲಿರುವ ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಹೊಸ ಡೆತ್ ವಾರೆಂಟ್ ಜಾರಿಗೊಳಿಸಬೇಕು ಎಂದು ಆಶಾದೇವಿ ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ಮುಂದಿನ ಆದೇಶದ ತನಕ ಗಲ್ಲು ಶಿಕ್ಷೆ ಜಾರಿಗೊಳಿಸಬಾರದು ಎಂದು ಪಟಯಾಲಾ ಹೌಸ್ ಕೋರ್ಟ್ ಜನವರಿ 31ರಂದು ಆದೇಶ ನೀಡಿತ್ತು.
ನಿರ್ಭಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ಎಲ್ಲಾ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ (31) ಎಲ್ಲರೂ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.

ಸುಪ್ರೀಂಕೋರ್ಟ್ ಮೊರೆ ಹೋಗುವೆ
ದೆಹಲಿಯಲ್ಲಿ ಮಾತನಾಡಿದ ನಿರ್ಭಯ ತಾಯಿ ಆಶಾ ದೇವಿ, "ನಾನು ಸುಪ್ರೀಂಕೋರ್ಟ್ ಮೊರೆ ಹೋಗುತ್ತೇನೆ. ಹೊಸದಾಗಿ ಡೆತ್ ವಾರೆಂಟ್ ಜಾರಿಗೊಳಿಸುವಂತೆ ಮನವಿ ಮಾಡುತ್ತೇನೆ. ಪಟಿಯಾಲಾ ಹೌಸ್ ಕೋರ್ಟ್ ಡೆತ್ ವಾರೆಂಟ್ ಜಾರಿಗೊಳಿಸಲು ವಿಳಂಬ ಮಾಡುತ್ತಿದೆ" ಎಂದು ಆರೋಪಿಸಿದರು.

ಎರಡು ಬಾರಿ ಮುಂದಕ್ಕೆ ಹೋಗಿದೆ
ನಿರ್ಭಯ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದು ಎರಡು ಬಾರಿ ಮುಂದಕ್ಕೆ ಹೋಗಿದೆ. ತಿಹಾರ್ ಜೈಲಿನಲ್ಲಿ ನೇಣಿಗೆ ಹಾಕಲು ಎಲ್ಲಾ ಸಿದ್ಧತೆ ನಡೆದಿದೆ. ಆದರೆ, ಕಾನೂನು ಪ್ರಕ್ರಿಯೆಗಳು ಮುಗಿದಿಲ್ಲ. ಜನವರಿ 31ರಂದು ಮುಂದಿನ ಆದೇಶದ ತನಕ ಗಲ್ಲು ಶಿಕ್ಷೆ ವಿಧಿಸಬಾರದು ಎಂದು ಪಟಿಯಾಲಾ ಹೌಸ್ ಕೋರ್ಟ್ ಆದೇಶ ನೀಡಿತ್ತು.

ಕ್ಷಮಾದಾನ ಅರ್ಜಿ ತಿರಸ್ಕಾರ
ನಿರ್ಭಯ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಮುಕೇಶ್ ಕುಮಾರ್ ಸಿಂಗ್ (32), ವಿನಯ್ ಕುಮಾರ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ (31) ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ. ಆದರೆ, ಅಪರಾಧಿ ಪವನ್ ಗುಪ್ತಾ ಇನ್ನೂ ಕ್ಷಮಾದಾನ ಅರ್ಜಿ ಹಾಕಿಲ್ಲ.

ಪ್ರತ್ಯೇಕವಾಗಿ ಗಲ್ಲು ಶಿಕ್ಷೆ
ನಿರ್ಭಯ ಪ್ರಕರಣದ ನಾಲ್ವರು ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಬಾರದು ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ಈ ಆದೇಶವನ್ನು ಕೇಂದ್ರ ಮತ್ತು ದೆಹಲಿ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿವೆ.












Click it and Unblock the Notifications