ನಿರ್ಭಯ; ಪೊಲೀಸರ ವಿರುದ್ಧ ಹೈಕೋರ್ಟ್‌ಗೆ ಪವನ್ ಅರ್ಜಿ
ನವದೆಹಲಿ, ಮಾರ್ಚ್ 12: ನಿರ್ಭಯ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಪವನ್ ಗುಪ್ತ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಮಾರ್ಚ್ 20ರ ಬೆಳಗ್ಗೆ 5.30ಕ್ಕೆ ಆತನನ್ನು ಗಲ್ಲಿಗೇರಿಸಲು ಡೆತ್ ವಾರೆಂಟ್ ಜಾರಿಯಾಗಿದೆ.
ತನ್ನ ವಕೀಲರ ಮೂಲಕ ಪವನ್ ಗುಪ್ತ ದೆಹಲಿ ಹೈಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿದ್ದಾನೆ. ಕೆಳಹಂತದ ನ್ಯಾಯಾಲಯ ಆತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದನ್ನು ಪ್ರಶ್ನೆ ಮಾಡಿದ್ದಾನೆ. ತನಗೆ ಪೊಲೀಸರು ಕಿರುಕುಳ ಕೊಟ್ಟು ಬಲವಂತದಿಂದ ಹೇಳಿಕೆ ಪಡೆದಿದ್ದಾರೆ ಎಂದು ನ್ಯಾಯಾಲಯಕ್ಕೆ ಆತ ಅರ್ಜಿ ಸಲ್ಲಿಸಿದ್ದ.
ದೆಹಲಿ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಗುರುವಾರ ಮಧ್ಯಾಹ್ನ ನಡೆಸಿತು. ಜುಲೈ 26 ಮತ್ತು 29ರಂದು ಇಬ್ಬರು ಪೊಲೀಸ್ ಪೇದೆಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಪೂರ್ವ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾಗ ಹಲ್ಲೆ ಮಾಡಲಾಗಿದೆ ಎಂಬುದು ಪವನ್ ಗುಪ್ತ ಆರೋಪ.

ಪೊಲೀಸರ ಹಲ್ಲೆಯಿಂದ ನನ್ನ ತಲೆಗೆ ಗಾಯವಾಗಿತ್ತು. ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ತಲೆಗೆ 14 ಹುಲಿಗೆ ಹಾಕಲಾಗಿತ್ತು ಎಂದು ಅರ್ಜಿಯಲ್ಲಿ ಪವನ್ ಗುಪ್ತ ಉಲ್ಲೇಖಿಸಿದ್ದಾನೆ. ಹರ್ಷ ವಿಹಾರ್ ಪೊಲೀಸ್ ಠಾಣೆಯಲ್ಲಿ ಪೇದೆಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಮನವಿ ಮಾಡಿದ್ದಾನೆ.
ಅನಿಲ್ ಕುಮಾರ್ ಮತ್ತು ಮತ್ತೊಬ್ಬ ಪೇದೆ ನನ್ನ ಮೇಲೆ ಹಲ್ಲೆ ಮಾಡಿದ್ದು ಗಲ್ಲಿಗೇರಿಸುವ ಮುನ್ನ ಎಫ್‌ಐಆರ್ ದಾಖಲಾಗಬೇಕು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾದಾಗ ಪೊಲೀಸ್ ಪೇದೆಗಳ ಗುರುತು ಹಿಡಿಯುವೆ ಎಂದು ಪವನ್ ಗುಪ್ತ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
ವರದಿ ಕೇಳಿದ ನ್ಯಾಯಾಲಯ : ಪವನ್ ಗುಪ್ತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಂಡೋಲಿ ಜೈಲಿನ ಅಧಿಕಾರಿಗಳು ಏಪ್ರಿಲ್ 8ರೊಳಗೆ ಈ ಕುರಿತು ವರದಿ ನೀಡಬೇಕು ಎಂದು ಸೂಚನೆ ನೀಡಿದೆ. ಈ ಅರ್ಜಿಯ ವಿಚಾರಣೆ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ಯಾವುದೇ ಆಡಚಣೆ ಉಂಟು ಮಾಡುವುದಿಲ್ಲ ಎಂದು ನ್ಯಾಯಾಲಯ ಗುರುವಾರ ಸ್ಪಷ್ಟಪಡಿಸಿದೆ.
ನಿರ್ಭಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಪವನ್ ಗುಪ್ತ ಸಹ ಒಬ್ಬ ಆಪರಾಧಿ. ಈಗ ಆತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಪವನ್ 2017ರ ಡಿಸೆಂಬರ್ 15ರಂದು ಗಲ್ಲು ಶಿಕ್ಷೆ ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಈತನ ಕ್ಯುರೆಟೀವ್ ಅರ್ಜಿ 2020ರ ಫೆಬ್ರವರಿ 29 ಮತ್ತು ಕ್ಷಮಾದಾನ ಅರ್ಜಿ ಮಾರ್ಚ್ 2, 2020ರಂದು ತಿರಸ್ಕಾರವಾಗಿದ್ದು, ಗಲ್ಲಿಗೇರಿಸುವುದು ಖಚಿತವಾಗಿದೆ.












Click it and Unblock the Notifications