'ರಫೇಲ್ ಲಗ್ನಪತ್ರಿಕೆ'ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ
ನವದೆಹಲಿ, ಜನವರಿ 22: ರಫೇಲ್ ಒಪ್ಪಂದದ ಥೀಮ್ ಆಧರಿಸಿ ಗುಜರಾತ್‌ನ ಜೋಡಿಯೊಂದು ಸಿದ್ಧಪಡಿಸಿದ ಮದುವೆ ಆಹ್ವಾನ ಪತ್ರಿಕೆಯ ಚಿತ್ರ ವೈರಲ್ ಆಗಿತ್ತು. ಆ ಲಗ್ನಪತ್ರಿಕೆ ಪ್ರಧಾನಿ ನರೇಂದ್ರ ಮೋದಿ ಕೈ ಸೇರಿದ್ದು, ಅವರ ಮೆಚ್ಚುಗೆಗೆ ಪಾತ್ರವಾಗಿದೆ.
ಸೂರತ್ ಮೂಲದ ಯುವರಾಜ್ ಪೊಖರ್ನಾ ಮತ್ತು ಸಾಕ್ಷಿ ಅಗರವಾಲ್ ಜೋಡಿಗೆ ಪತ್ರ ಬರೆದಿರುವ ಮೋದಿ, ಆಹ್ವಾನ ಪತ್ರಿಕೆಯಲ್ಲಿರುವ ಅಂಶಗಳನ್ನು ಜಾಣ್ಮೆಯಿಂದ ಬರೆಯಲಾಗಿದೆ. ಈ ಪತ್ರಿಕೆ ದೇಶಕ್ಕಾಗಿ ಇನ್ನಷ್ಟು ಕಠಿಣ ಶ್ರಮ ವಹಿಸಿ ಕೆಲಸ ಮಾಡುವಂತೆ ಪ್ರೇರಣೆ ನೀಡಿದೆ ಎಂದು ಹೇಳಿದ್ದಾರೆ.
ಈ ಜೋಡಿಯ ಮದುವೆ ಇಂದು (ಜನವರಿ 22) ನಡೆಯಿತು.

'ಯುವರಾಜ್ ಮತ್ತು ಸಾಕ್ಷಿ ಅವರ ಮದುವೆಯ ಸಂಭ್ರಮದ ಸಮಾರಂಭದಲ್ಲಿ ಪೊಖರ್ನಾ ಕುಟುಂಬಕ್ಕೆ ಹೃತ್ಪೂರ್ವಕ ಶುಭಾಶಯಗಳು. ಅತಿಥಿಗಳಿಗೆ ಕಳುಹಿಸಿದ ವಿಶಿಷ್ಟ ಲಗ್ನಪತ್ರಿಕೆಯನ್ನು ಗಮನಿಸಿದ್ದೆ. ದೇಶದ ಕುರಿತಾದ ನಿಮ್ಮ ಕಾಳಜಿ ಮತ್ತು ಪ್ರೀತಿಯನ್ನು ಅದರಲ್ಲಿನ ಜಾಣ್ಮೆಯ ಅಂಶಗಳು ಪ್ರತಿಫಲಿಸುತ್ತವೆ. ಇದು ನಮ್ಮ ದೇಶಕ್ಕಾಗಿ ಇನ್ನಷ್ಟು ಶ್ರಮವಹಿಸಿ ದುಡಿಯಲು ನನಗೆ ಸ್ಫೂರ್ತಿ ನೀಡಿದೆ' ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.
'ಶಾಂತಿ ಕಾಪಾಡಿ ನಮೋರನ್ನು ನಂಬಿ' ಎಂಬ ಶೀರ್ಷಿಕೆಯಡಿ ಈ ಜೋಡಿ ಆಹ್ವಾನ ಪತ್ರಿಕೆಯಲ್ಲಿ ರಫೇಲ್ ಒಪ್ಪಂದದ ಬಗ್ಗೆ ಕೆಲವು ವಾಸ್ತವಗಳು ಎಂದು ಒಂಬತ್ತು ಅಂಶಗಳನ್ನು ಪಟ್ಟಿಮಾಡಿ ನೀಡಿತ್ತು.

ಅಲ್ಲದೆ, ಮದುವೆಗೆ ಬರುವ ಅತಿಥಿಗಳಿಂದ ನಿರೀಕ್ಷಿಸುವ ಏಕೈಕ ಉಡುಗೊರೆಯೆಂದರೆ ಮುಂದಿನ ಚುನಾವಣೆಯಲ್ಲಿ ಮೋದಿಗೆ ಮತಚಲಾಯಿಸಿ ಮತ್ತು ಪಕ್ಷದ ಆಪ್ ಮೂಲಕ ಪಕ್ಷಕ್ಕೆ ಆರ್ಥಿಕ ದೇಣಿಗೆ ನೀಡಿ ಎಂದು ಮನವಿ ಮಾಡಿದ್ದರು.
ಈ ವೆಡ್ಡಿಂಗ್ ಕಾರ್ಡ್ ದೇಶದಾದ್ಯಂತ ವೈರಲ್ ಆಗಿತ್ತು.












Click it and Unblock the Notifications