ಜಾರ್ಖಂಡ್ ಗುಂಪು ಹತ್ಯೆ: ಘಟನೆ ಬಗ್ಗೆ ಅಪಾರ ನೋವಿದೆ ಎಂದ ಮೋದಿ
ನವದೆಹಲಿ, ಜೂನ್ 26: ದೇಶದಾದ್ಯಂತ ಚರ್ಚೆ ಆಗುತ್ತಿರುವ ಜಾರ್ಖಂಡ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಕ್ಷುಲ್ಲಕ ಕಾರಣಕ್ಕೆ ಕಂಬಕ್ಕೆ ಕಟ್ಟಿ ಥಳಿಸಿ ಹತ್ಯೆ ಮಾಡಿರುವ ಬಗ್ಗೆ ಕೊನೆಗೂ ಪ್ರಧಾನಿ ಮೋದಿ ಅವರು ಮೌನ ಮುರಿದಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ನರೇಂದ್ರ ಮೋದಿ ಅವರು, ಜಾರ್ಖಂಡ್‌ನ ಗುಂಪು ಹತ್ಯೆಯಿಂದ ನೋವಾಗಿದೆ ಆದರೆ ಇದಕ್ಕೆ ಜಾರ್ಖಂಡ್ ರಾಜ್ಯವನ್ನು ದೂಷಿಸಲು ಸಾಧ್ಯವಿಲ್ಲ ಎಂದು ಸರ್ಕಾರದ ಬೆನ್ನಿಗೆ ನಿಂತಿದ್ದಾರೆ.
ರಾಜ್ಯಸಭೆಯಲ್ಲಿ ಕೆಲವರು ಜಾರ್ಖಂಡ್ ಅನ್ನು ಗುಂಪು ಹತ್ಯೆಗಳ ತವರು ಎಂದು ಕರೆದಿದ್ದಾರೆ, ಒಂದು ರಾಜ್ಯವನ್ನು ಅವಮಾನಿಸುವ ಹಕ್ಕು ಇಲ್ಲಿ ಯಾರಿಗೂ ಇಲ್ಲ. ಅಷ್ಟೆ ಅಲ್ಲದೆ, ಜಾರ್ಖಂಡ್ ಅನ್ನು ಗುಂಪು ಹತ್ಯೆಯ ತವರು ಎಂದ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.

'ಜಾರ್ಖಂಡ್‌ನಲ್ಲಿ ನಡೆದ ಘಟನೆಯಿಂದ ದುಖಃವಾಗಿದೆ'
ಜಾರ್ಖಂಡ್‌ನಲ್ಲಿ ನಡೆದ ಘಟನೆಯಿಂದ ತೀವ್ರ ದುಖಃವಾಗಿದೆ, ಹತ್ಯೆಯಲ್ಲಿ ಭಾಗೀಧಾರರಾದವರಿಗೆ ಗರಿಷ್ಟ ಶಿಕ್ಷೆ ಆಗಬೇಕಿದೆ, ಆದರೆ ಈ ವಿಷಯದಲ್ಲಿ ರಾಜ್ಯವನ್ನು ದೂಶಿಸುವುದು ಸರಿಯಲ್ಲ ಎಂದು ಮೋದಿ ಹೇಳಿದ್ದಾರೆ.

'ಜೈ ಶ್ರೀರಾಮ್, ಜೈ ಹನುಮಾನ್ ಹೇಳುವಂತೆ ಒತ್ತಾಯ'
ಜೂನ್ 18 ರಂದು 22 ವರ್ಷದ ತಬ್ರೇಜ್ ಅನ್ಸಾರಿ ಎಂಬಾತ ಬೈಕ್ ಕದ್ದಿದ್ದಾನೆ ಎಂದು ಆರೋಪಿಸಿ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಅಷ್ಟೆ ಅಲ್ಲದೆ, ಆತನಿಂದ ಜೈ ಶ್ರೀರಾಮ್, ಜೈ ಹನುಮಾನ್ ಎಂದು ಒತ್ತಾಯದಿಂದ ಹೇಳಿಸಲಾಗಿದೆ.

ಕಂಬಕ್ಕೆ ಕಟ್ಟಿ ಗಂಟೆಗಟ್ಟಲೆ ಹಲ್ಲೆ
ಕಂಬಕ್ಕೆ ಕಟ್ಟಿ ಗಂಟೆ ಗಟ್ಟಲೆ ಆತನ ಮೇಲೆ ಹಲ್ಲೆ ಮಾಡಲಾಗಿದ್ದು, ಆ ನಂತರ ಆತನನ್ನು ಪೊಲೀಸ್‌ಗೆ ಒಪ್ಪಿಸಲಾಗಿದೆ. ಆದರೆ ತೀವ್ರ ಗಾಯಗಳಿಂದ ಘಾಸಿಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ವಿರುದ್ಧ ಭಾರಿ ಆಕ್ರೋಶ ದೇಶದಾದ್ಯಂತ ಕೇಳಿಬರುತ್ತಿದೆ.

ಗುಲಾಂ ನಬಿ ಆಜಾದ್ ಮಾತನಾಡಿದ್ದರು
ನಿನ್ನೆಯಷ್ಟೆ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಮಾತನಾಡಿ, ಗುಂಪು ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದರು. ಮತ್ತು ಜಾರ್ಖಂಡ್‌ನಲ್ಲಿ ಈ ಹಿಂದೆ ನಡೆದಿದ್ದ ಗುಂಪು ಹತ್ಯೆಗಳ ಬಗ್ಗೆ ಮಾಹಿತಿ ನಿಡಿ, ಜಾರ್ಖಂಡ್ ಸರ್ಕಾರವನ್ನು ಟೀಕಿಸಿದ್ದರು.












Click it and Unblock the Notifications