ವಿಮಾನದ ಟಿಕೆಟ್‌ಗಾಗಿ ವರ್ಷದ ವೇತನ ಕೊಟ್ಟಿದ್ದರು ನನ್ನ ತಂದೆ: ಸುಂದರ್ ಪಿಚೈ
ನವದೆಹಲಿ, ಜೂನ್ 9: ನಾನು ಭಾರತದಿಂದ ಅಮೆರಿಕಾಕ್ಕೆ ಬರಲು ವಿಮಾನದ ಟಿಕೆಟ್‌ಗಾಗಿ ನನ್ನ ತಂದೆ ತನ್ನ ಒಂದು ವರ್ಷದ ವೇತನಕ್ಕೆ ಸಮವಾದ ಮೊತ್ತವನ್ನು ಖರ್ಚು ಮಾಡಿದ್ದರು. ಹೀಗಾಗಿಯೇ ನಾನು ಸ್ಟ್ಯಾನ್‌ಫೋರ್ಡ್ ವಿವಿಗೆ ಬರಲು ಸಾಧ್ಯವಾಯಿತು. ಅದೇ ನನ್ನ ಮೊದಲ ವಿಮಾನಯಾನ ಎಂದು ಅಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಕೊರೋನಾ ವೈರಸ್ ಸಾಂಕ್ರಾಮಿಕದ ಮಧ್ಯೆ, ಗೂಗಲ್‌ನ ವೀಡಿಯೊ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಆಯೋಜಿಸಿದ್ದ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಿಚೈ, ''ಅಮೆರಿಕಾ ಅನ್ನುವುದು ದುಬಾರಿ ವೆಚ್ಚಗಳ ದೇಶ. ಮನೆಗೆ ಫೋನ್ ಮಾಡಲು ನಿಮಿಷಕ್ಕೆ ಎರಡು ಡಾಲರ್ ಖರ್ಚಾಗುತ್ತಿತ್ತು. ಇದು ಭಾರತದಲ್ಲಿ ನಮ್ಮ ತಂದೆಯ ತಿಂಗಳ ವೇತನಕ್ಕೆ ಸಮ. ನಾನು ಇಂದು ಉನ್ನತ ಸ್ಥಾನದಲ್ಲಿದ್ದೇನೆ. ಅದೃಷ್ಟದ ಹೊರತಾಗಿ ಅಂದು ಪರಿಸ್ಥಿತಿಯನ್ನು ನಾನು ನಿಭಾಯಿಸಿದ ಪರಿಯೇ ಇದೆಲ್ಲಕ್ಕೂ ಕಾರಣ. ತಂತ್ರಜ್ಞಾನದ ಬಗೆಗಿನ ತುಡಿತ, ಆಸಕ್ತಿ ಮತ್ತು ಮುಕ್ತ ಮನಸ್ಸು ನನಗೆ ಅವಕಾಶಗಳನ್ನು ಸೃಷ್ಟಿಸಿದೆ," ಎಂದು ಪಿಚೈ ವಿವರಿಸಿದ್ದಾರೆ.
ಗೂಗಲ್ ಸರ್ಚ್ ಇಂಡಿಯಾ: 'ಕೊರೊನಾ'ವನ್ನು ಹಿಂದೆ ಹಾಕಿದ 'ಸಿನಿಮಾ'
ಇದೇ ವೇಳೆ ತಾವು ಅಮೆರಿಕಕ್ಕೆ ಬಂದಾಗ ಎದುರಿಸಿದ ನಾನಾ ಸವಾಲುಗಳನ್ನು ನಿಭಾಯಿಸಿದ್ದನ್ನು ಅವರು ಹಂಚಿಕೊಂಡಿದ್ದಾರೆ. ಹಾಗೂ 2019-20ರ ಸಾಲಿನ ಪದವೀಧರನ್ನು ಉದ್ದೇಶಿಸಿ ಪಿಚೈ ಈ ಮಾತನಾಡಿದ್ದು, ವಿದ್ಯಾರ್ಥಿಗಳಲ್ಲಿ ಭರವಸೆ ತುಂಬಿದ್ದಾರೆ.
ಜಾರ್ಜ್ ಫ್ಲಾಯ್ಡ್ ಹತ್ಯೆ: ಜನಾಂಗೀಯ ತಾರತಮ್ಯದ ವಿರುದ್ಧ ದನಿಯೆತ್ತಿದ ಆಪಲ್, ಗೂಗಲ್, ಮೈಕ್ರೋಸಾಫ್ಟ್
"ಮುಕ್ತರಾಗಿರಿ, ತಾಳ್ಮೆಯಿಂದಿರಿ, ಭರವಸೆಯಿಡಿ. ಇದನ್ನು ಮಾಡಲು ನಿಮ್ಮಿಂದ ಸಾಧ್ಯವಾದರೆ, ಇತಿಹಾಸವು 2020 ರ ತರಗತಿಯನ್ನು ನೆನಪಿಸಿಕೊಳ್ಳುತ್ತದೆ. ನೀವು ಕಳೆದುಕೊಂಡದ್ದಕ್ಕಾಗಿ ಅಲ್ಲ, ಆದರೆ ನೀವು ಏನು ಬದಲಾಯಿಸಿದ್ದೀರಿ ಎಂಬುದಕ್ಕೆ. ಎಲ್ಲವನ್ನೂ ಬದಲಾಯಿಸಲು ನಿಮಗೆ ಅವಕಾಶವಿದೆ. ನಾನು ಆಶಾವಾದಿಯಾಗಿದ್ದೇನೆ ಎಂದರು.