ಮುಲಾಯಂ ಹುಟ್ಟುಹಬ್ಬಕ್ಕೆ ತಾಲಿಬಾನ್ ಫಂಡ್: ಅಜಂ
ನವ ದೆಹಲಿ, ನ. 21: ಅಜಂ ಖಾನ್... ಇದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಲ್ಲಿ ಪ್ರಭಾವಿ ಹೆಸರು. ಮುಸ್ಲಿಂ ಸಮುದಾಯದ ಓಟುಗಳನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯಬಲ್ಲ ವರ್ಚಸ್ಸು ಹೊಂದಿರುವ ನಾಯಕ ಹಾಗೂ ಪಕ್ಷದ ಪ್ರಶ್ನಾತೀತ ನಾಯಕ ಮುಲಾಯಂ ಸಿಂಗ್ ಅವರ ನೆಚ್ಚಿನ ಬಂಟ ಕೂಡ ಹೌದು. ಆದರೆ, ಅದೇ ಅಜಂ ಇಂದು ಮುಲಾಯಂಗೆ ಭಾರೀ ಮುಜುಗರ ತಂದೊಡ್ಡಿದ್ದಾರೆ.
ವಿಷಯ ಏನೆಂದರೆ... ಮುಲಾಯಂಸಿಂಗ್ ಯಾದವ್ ನ. 22ರಂದು ತನ್ನ 76ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ತಯಾರಿ ನಡೆಸಿದ್ದಾರೆ. ಇದಕ್ಕಾಗಿ ತಯಾರಿಸಿದ 75 ಅಡಿ ಉದ್ದದ ಕೇಕ್ ಹಾಗೂ ಲಂಡನ್‌ನಿಂದ ತರಿಸಿರುವ 'ಬಗ್ಗಿ' ಸಮಾರಂಭದ ಪ್ರಮುಖ ಆಕರ್ಷಣೆಗಳಾಗಿವೆ. ಅಭಿಮಾನಿಗಳ ಪಾಲಿಗೆ ಇದು ಹಬ್ಬವಾಗಿದ್ದರೂ, ವಿರೋಧ ಪಕ್ಷಗಳ ಕಟು ಟೀಕೆಗೆ ಗುರಿಯಾಗಿದೆ.
ಅದ್ದೂರಿ ಹುಟ್ಟುಹಬ್ಬದ ಹಣದ ಮೂಲವನ್ನು ಬಿಜೆಪಿ ಈಗಾಗಲೇ ಪ್ರಶ್ನಿಸಿದೆ. ಇದಕ್ಕೆ ಅಜಂ ಖಾನ್ "ತಾಲಿಬಾನ್ ನೆ ದಿಯಾ, ದಾವೂದ್ ನೆ ದಿಯಾ, ಸಾರಾ ತಾಲಿಬಾನ್ ಕಾ ಫಂಡ್ ಹೈ" (ತಾಲಿಬಾನ್ ಕೊಟ್ಟಿದೆ, ದಾವೂದ್ ಇಬ್ರಾಹಿಂ ಕೊಟ್ಟಿದ್ದಾನೆ. ಪೂರ್ತಿ ಹಣ ತಾಲಿಬಾನ್‌ನದು) ಎಂದು ಪ್ರತಿಕ್ರಿಯಿಸಿದ್ದಾರೆ. [ಸೈಕಲ್ ಪಂಕ್ಚರ್ ಮಾಡಿ ಕೈ ಹಿಡಿದ ಯೋಗೇಶ್ವರ್]

ಪಕ್ಷದ ಮೂಲಗಳ ಪ್ರಕಾರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಮುಲಾಯಂ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಗ್ನರಾಗಿದ್ದಾರೆ. ಶುಕ್ರವಾರ ರಾತ್ರಿ 12 ಗಂಟೆ ನಂತರ 75 ಅಡಿಗಳಷ್ಟು ಉದ್ದದ ಕೇಕ್ ಕತ್ತರಿಸಲಿದ್ದಾರೆ. ಈ ಸಮಾರಂಭದ ನಿಮಿತ್ತ ಸಮಾಜವಾದಿ ಪಕ್ಷದ ಕಾರ್ಯಕರ್ತರು ಸಂಪೂರ್ಣ ರಾಮಪುರ ನಗರವನ್ನು ಸಿಂಗರಿಸಿದ್ದಾರೆ.
ಇದಕ್ಕೂ ಮೊದಲು ಹನ್ಸ್ ರಾಜ್ ಹನ್ಸ್ ಹಾಗೂ ಸಬ್ರಿ ಸಹೋದರರ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಲ್ಲದೆ, ಇದೇ ಸಂದರ್ಭದಲ್ಲಿ ಒಂದು ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಿದ್ದು, ನಂತರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಲಿದ್ದಾರೆ.












Click it and Unblock the Notifications