ರಿಪೋರ್ಟರ್ ಮೇಲೆ ಹಲ್ಲೆ ಮಾಡುವುದಾಗಿ ಮಣಿ ಶಂಕರ್ ಅಯ್ಯರ್ ಬೆದರಿಕೆ
ನವದೆಹಲಿ, ಮೇ 15 : ನರೇಂದ್ರ ಮೋದಿಯವರನ್ನು 'ನೀಚ್ ಆದ್ಮಿ' ಎಂದು 2017ರಲ್ಲಿ ಹೇಳಿದ್ದನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಅವರು ಮತ್ತೊಂದು ವಿವಾದಕ್ಕೆ ತಮ್ಮನ್ನು ಎಳೆದುಕೊಂಡಿದ್ದಾರೆ.
ಈ ಬಾರಿ ಟಿವಿ ರಿಪೋರ್ಟರ್ ಒಬ್ಬರಿಗೆ ದೈಹಿಕ ಹಲ್ಲೆ ಮಾಡುವುದಾಗಿ ಬೆದರಿಸಿ ದರ್ಪ ತೋರಿಸಿದ್ದಾರೆ. ಮೋದಿಯವರ ಬಗ್ಗೆ ಹೀನ ಮಾತುಗಳನ್ನಾಡಿದ್ದನ್ನು ಸಮರ್ಥಿಸಿ ಬರೆದ ಲೇಖನದ ಬಗ್ಗೆ ಪ್ರಸ್ತಾಪಿಸಿದಾಗ ತಾಳ್ಮೆ ಕಳೆದುಕೊಂಡ ಮಣಿ ಶಂಕರ್ ಅಯ್ಯರ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.
"ನಿಮಗೆ ನರೇಂದ್ರ ಮೋದಿ ಎಂಬ ವ್ಯಕ್ತಿ ಇದ್ದಾನೆ ಎಂಬುದು ಗೊತ್ತಿಲ್ಲವೆ? ಅವರು ಮಾಡುತ್ತಿರುವ ವಾಗ್ದಾಳಿಯ ಬಗ್ಗೆ ತಿಳಿದಿಲ್ಲವೆ? ಬೇಕಿದ್ದರೆ ಅವರನ್ನು ಹೋಗಿ ಪ್ರಶ್ನೆ ಕೇಳಿ. ಆದರೆ, ಅವರು ಹೇಡಿಯಂತೆ ವರ್ತಿಸುವುದರಿಂದ ಅವರು ನಿಮ್ಮೊಂದಿಗೆ ಮಾತಾಡುವುದಿಲ್ಲ. ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸುವುದಿಲ್ಲ" ಎಂದು ಹಿಂದಿಯಲ್ಲಿ ಮಣಿ ಶಂಕರ್ ಅಯ್ಯರ್ ವಾಕ್ ಪ್ರಹಾರ ಮಾಡಿದ್ದಾರೆ.

ನಂತರ, ಪತ್ರಕರ್ತನ ಮೇಲೆ ಕೈ ಮಾಡಿದ್ದಲ್ಲದೆ, ಮೈಕ್ರೋಫೋನ್ ಅನ್ನು ತಳ್ಳಿ, ನೀವು ನನಗೆ ಯಾವುದೇ ಪ್ರಶ್ನೆ ಕೇಳುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಪ್ರಶ್ನೆ ಕೇಳಲು ರಿಪೋರ್ಟರ್ ಮುಂದಾದಾಗ, 'ಐ ವಿಲ್ ಹಿಟ್ ಯು' ಎಂದು ಅವರ ಮೇಲೆ ಕಿಡಿಕಾರಿದ್ದಾರೆ. ಪತ್ರಕರ್ತ ಕ್ಷಮೆ ಕೇಳಿದರೂ ಬಿಡದ ಮಣಿ ಶಂಕರ್ ಅಯ್ಯರ್ ಅವರು ಕೆಟ್ಟ ಪದಗಳಲ್ಲಿ ಅವರನ್ನು ಬೈಯುತ್ತಲೇ ಇದ್ದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಆನ್ ಕ್ಲೌಡ್ ನೈನ್ ಆಫ್ ನ್ಯಾಷನಾಲಿಸಂ ಎಂಬ ಶೀರ್ಷಿಕೆಯಡಲ್ಲಿ ಕಾಶ್ಮೀರದ ಬಗ್ಗೆ ಲೇಖನ ಬರೆದಿರುವ ಅವರು, ಅದರಲ್ಲಿ ನರೇಂದ್ರ ಮೋದಿಯವರನ್ನು ಕೆಟ್ಟ ಬಾಯಿಯ ಮನುಷ್ಯ ಎಂದು ಹೀಗಳೆದಿದ್ದಾರೆ. ನಾನು 2017ರ ಡಿಸೆಂಬರ್ ನಲ್ಲಿ ಏನು ಹೇಳಿದ್ದೆ, ಅದೀಗ ನಿಜವಾಗಿದೆ. ನಾನು ಅಂದೇ ಭವಿಷ್ಯ ನುಡಿದಿರಲಿಲ್ಲವೆ? ಎಂದು ಅಂದು ಹೇಳಿದ ಮಾತನ್ನು ಸಮರ್ಥಿಸಿಕೊಂಡಿದ್ದು ವಿವಾದದ ಕಿಡಿಯನ್ನು ಸೃಷ್ಟಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರನ್ನು, ಗುಜರಾತ್ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, 'ನೀಚ್ ಕಿಸಂ ಕಾ ಆದ್ಮಿ' ಎಂದು ಮಣಿ ಶಂಕರ್ ಅಯ್ಯರ್ ಅವರು ಜರಿದಿದ್ದರು. ಇದಕ್ಕಾಗಿ ಅವರನ್ನು ತಾತ್ಕಾಲಿಕವಾಗಿ ಪಕ್ಷದಿಂದಲೇ ಉಚ್ಚಾಟಿಸಲಾಗಿತ್ತು. ಆದರೆ, ಒಂದು ವರ್ಷದ ಅವಧಿಯಲ್ಲಿಯೇ ಅವರನ್ನು ರಾಹುಲ್ ಗಾಂಧಿ ಅವರು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕರು, ಮಣಿ ಶಂಕರ್ ಅಯ್ಯರ್ ಅವರನ್ನು 'ಗಾಂಧಿ ಕುಟುಂಬದ ಮುಕುಟಮಣಿ' ಎಂದು ವ್ಯಂಗ್ಯವಾಡಿದ್ದು, 1984ರ ಸಿಖ್ ವಿರೋಧಿ ದಂಗೆಯ ಬಗ್ಗೆ ಸಲ್ಲದ ಮಾತುಗಳನ್ನಾಡಿ ಸ್ಯಾಮ್ ಪಿತ್ರೋಡಾ ಅವರು ಗಮನ ಸೆಳೆಯುತ್ತಿರುವುದನ್ನು ಸಹಿಸಿಕೊಳ್ಳದೆ ಮಣಿ ಶಂಕರ್ ಅಯ್ಯರ್ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಂಬಿತ್ ಪಾತ್ರಾ ಮತ್ತು ಅಮಿತ್ ಮಾಳವೀಯ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications