ಸುದ್ದಿಗೋಷ್ಠಿಯಲ್ಲಿ ಕೇಜ್ರಿವಾಲ್ ಮೇಲೆ ಮಸಿ: ಯಾರವನು?
ನವದೆಹಲಿ, ನ 19: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ರಾಜಧಾನಿ ದೆಹಲಿಯಲ್ಲಿ ಹೊರ ಹೊಮ್ಮುತ್ತಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಮೇಲೆ ಮಸಿ ಎರಚಿದ ಘಟನೆ ಸೋಮವಾರ (ನ18) ನಡೆದಿದೆ.
ಆಮ್ ಆದ್ಮಿ ಪಕ್ಷದ ಸುದ್ದಿಗೋಷ್ಠಿಯಲ್ಲಿ ಈ ಘಟನೆ ನಡೆದಿದ್ದು ಮಸಿ ಎರಚಿದ ವ್ಯಕ್ತಿ 'ಅಣ್ಣಾ ಹಜಾರೆ ಜಿಂದಾಬಾದ್' ಎಂದು ಘೋಷಣೆ ಕೂಗುತ್ತಾ ಅರವಿಂದ್ ಕೇಜ್ರಿವಾಲ್ ಮೇಲೆ ಮಸಿ ಎರಚಿ ನಂತರ ಪೊಲೀಸರ ಅತಿಥಿಯಾಗಿದ್ದಾನೆ.
ಕುತೂಹಲಕಾರಿ ಸಂಗತಿಯೆಂದರೆ ಮೊದಲು ತಾನು ಅಣ್ಣಾ ಹಜಾರೆ ಬೆಂಬಲಿಗ ಎನ್ನುತ್ತಿದ್ದ ವ್ಯಕ್ತಿ ತಾನು ಮಹಾರಾಷ್ಟ್ರದಿಂದ ಬಂದ ಬಿಜೆಪಿ ಕಾರ್ಯಕರ್ತ ಎಂದು ತದನಂತರ ಉಲ್ಟಾ ಹೊಡಿದಿದ್ದಾನೆ.
ನಚಿಕೇತ್ ವಾಘ್ರೇಕರ್ ಎನ್ನುವನಾದ ನಾನು ಮಹಾರಾಷ್ಟ್ರದಿಂದ ಬಂದಿದ್ದೇನೆ. ನಾನು ಅಣ್ಣಾ ಹಜಾರೆ ಬೆಂಬಲಿಗ, ಹಜಾರೆ ಹೆಸರಿನಲ್ಲಿ ಕೇಜ್ರಿವಾಲ್ ಜನಪ್ರಿಯರಾದರು.
ಅವರನ್ನೇ ಗುರು ಎಂದರು, ನಂತರದ ದಿನಗಳಲ್ಲಿ ಹಜಾರೆ ಹೆಸರನ್ನು ಕೇಜ್ರಿವಾಲ್ ದುರ್ಬಳಕೆ ಮಾಡಿಕೊಂಡರು ಎಂದು ಈತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಇಂಟರೆಸ್ಟಿಂಗ್ ಟ್ವಿಸ್ ಏನು ಗೊತ್ತಾ? ಮುಂದೆ ಓದಿ..

ಕೇಜ್ರಿವಾಲ್ ಮೇಲೆ ಮಸಿ
ನಾನು ಕೇಜ್ರಿವಾಲ್ ಮೇಲೆ ಮಸಿ ಎರಚಿ ಏನೂ ತಪ್ಪು ಮಾಡಿಲ್ಲ. ಜನ್ ಲೋಕಪಾಲ್ ಮಸೂದೆಯ ವಿಚಾರದಲ್ಲಿ ಅಣ್ಣಾ ಹಜಾರೆಯ ಹೆಸರನ್ನು ಕೇಜ್ರಿವಾಲ್ ದುರ್ಬಳಕೆ ಮಾಡಿಕೊಂಡರು. ನಾನೊಬ್ಬ ಬಿಜೆಪಿ ಕಾರ್ಯಕರ್ತ ಎಂದು ಈತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಪಾರ್ಲಿಮೆಂಟ್ ಸ್ಟೀಟ್ ಪೊಲೀಸ್
ಬಂಧಿತ ನಚಿಕೇತನನ್ನು ದೆಹಲಿಯ ಪಾರ್ಲಿಮೆಂಟ್ ಸ್ಟೀಟ್ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ದೇಶದಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ. ಅಣ್ಣಾಹಜಾರೆಗೆ ಸಿಕ್ಕ ಜನಬೆಂಬಲ ನೋಡಿ ದೇಶ ಸರಿಯಾದ ದಾರಿಯಲ್ಲಿ ಇನ್ನು ಮುಂದಾದರೂ ಸಾಗಬಹುದು ಅಂದುಕೊಂಡೆ. ಆದರೆ ಹಜಾರೆ ಕೇಜ್ರಿವಾಲ್ ಅವರಿಂದ ದೂರ ಸರಿದಿದ್ದಾರೆ - ಮಸಿ ಎರಚಿದ ಬಂಧಿತ.

ಬಿಜೆಪಿ ಹೆಸರು ಯಾಕೆ ಎತ್ತಿದ ಎನ್ನುವುದೇ ಪ್ರಶ್ನೆ
ಬಂಧಿತ ಈ ವ್ಯಕ್ತಿ ಅರವಿಂದ್ ಕೇಜ್ರಿವಾಲ್ ಅವರನ್ನು ದೂರುತ್ತಾ, ಅಣ್ಣಾಹಜಾರೆಯವರನ್ನು ಬೆಂಬಲಿಸುತ್ತಾ ಬಿಜಿಪಿಯನ್ನು ಯಾಕೆ ಈ ಘಟನೆಗೆ ಎಳೆದು ತಂದ ಎನ್ನುವುದೇ ಇಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ.

ಇತರರ ಮೇಲೂ ಮಸಿ
ಸುದ್ದಿಗೋಷ್ಠಿಯಲ್ಲಿ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಶಾಂತಿ ಭೂಷಣ್, ಸಂಜಯ್ ಸಿಂಗ್, ಪ್ರಶಾಂತ್ ಭೂಷಣ್ ಕೂಡಾ ಭಾಗವಹಿಸಿದ್ದರು. ಬಂಧಿತ ನಚಿಕೇತ್ ಗೋಷ್ಠಿಯಲ್ಲಿದ್ದ ಎಲ್ಲರ ಮೇಲೂ ಮಸಿ ಎರಚಿದ.

ಕೇಜ್ರಿವಾಲ್ ಹೇಳಿಕೆ
ಆಮ್ ಆದ್ಮಿ ಪಕ್ಷದ ಜನಪ್ರಿಯತೆಯಿಂದ ಕಂಗಾಲಾಗಿರುವ ರಾಷ್ಟ್ರೀಯ ಪಕ್ಷಗಳ ಕೆಲವರು ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಈ ಘಟನೆಯಿಂದ ನಾವೇನೂ ವಿಚಲಿತರಾಗುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.












Click it and Unblock the Notifications