ಮೂಢನಂಬಿಕೆ ಮೆಟ್ಟಿ ನಿಂತು ಹೊಸ ಇತಿಹಾಸ ಬರೆದ ಬೋಂಡಾ ಬುಡಕಟ್ಟಿನ ಮೊದಲ ವಿದ್ಯಾರ್ಥಿ: ನೀಟ್ ಗೆದ್ದ ಮಂಗಳ ಮುಡುಲಿ ಯಶೋಗಾಥೆ

ಸಾಧಿಸಬೇಕು ಎನ್ನುವ ಛಲ ಒಂದಿದ್ದರೆ ಬಡತನ, ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಎಂತಹದ್ದೇ ಅಡೆತಡೆಗಳು ಅಡ್ಡ ಬರುವುದಿಲ್ಲ ಎಂಬುದಕ್ಕೆ ಒಡಿಶಾದ 19 ವರ್ಷದ ಯುವಕ ಮಂಗಳ ಮುಡುಲಿ ಒಂದು ಒಳ್ಳೆಯ ಉದಾಹರಣೆ. ಭಾರದಲ್ಲಿ ಅತ್ಯಂತ ಹಿಂದುಳಿದ ಮತ್ತು ಕಣ್ಮರೆಯಾಗಿ ಹೋಗುತ್ತಿರುವ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ವ್ಯಾಪ್ತಿಗೆ ಸೇರುವ 'ಬೋಂಡಾ' ಸಮುದಾಯದ ಈ ಯುವಕ, ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ಎಂಬಿಬಿಎಸ್ ಕೋರ್ಸ್‌ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಬೋಂಡಾ ಸಮುದಾಯದಿಂದ ವೈದ್ಯಕೀಯ ಕೋರ್ಸ್‌ಗೆ ಸೀಟು ಪಡೆದ ಮೊದಲ ಯುವಕ ಎಂಬ ಹೆಗ್ಗಳಿಕೆಗೆ ಮಂಗಳ ಮುಡುಲಿ ಪಾತ್ರರಾಗಿದ್ದಾರೆ.

ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯ ಬಾದ್‌ಬೆಲ್ ಎಂಬ ಸಣ್ಣ ಗ್ರಾಮದ ಸಣ್ಣ ಹಿಡುವಳಿ ರೈತ ಕುಟುಂಬದಲ್ಲಿ ಜನಿಸಿದ ಮಂಗಳ ಮುಡುಲಿ ಅವರಿಗೆ ಬಾಲ್ಯದಿಂದಲೂ ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಇತ್ತು. ಅತ್ಯಂತ ಕಡಿಮೆ ಸಾಕ್ಷರತಾ ಪ್ರಮಾಣ ಹೊಂದಿರುವ ಬೋಂಡಾ ಸಮುದಾಯದಲ್ಲಿ ಬೆಳೆದ ಇವರಿಗೆ ಮೂಲಭೂತ ಸೌಕರ್ಯಗಳ ಕೊರತೆಯೇ ದೊಡ್ಡ ಸವಾಲಾಗಿತ್ತು. ಆದರೆ ತಮ್ಮ ಕಠಿಣ ಪರಿಶ್ರಮದಿಂದ ನೀಟ್ ಪರೀಕ್ಷೆಯಲ್ಲಿ ರಾಜ್ಯದ ಬುಡಕಟ್ಟು ಅಭ್ಯರ್ಥಿಗಳ ಶ್ರೇಣಿ ಪಟ್ಟಿಯಲ್ಲಿ 261ನೇ ರ‍್ಯಾಂಕ್‌ ಗಳಿಸಿದ್ದಾರೆ. ಈಗ ಅವರು ಒಡಿಶಾದ ಬ್ರಹ್ಮಪುರದಲ್ಲಿರುವ ಪ್ರತಿಷ್ಠಿತ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ಪಡೆಯಲಿದ್ದಾರೆ.

Mangala Muduli

ಶಿಕ್ಷಕನ ಪ್ರೋತ್ಸಾಹ

ಮಂಗಳ ಮುಡುಲಿ ಅವರ ಈ ಅದ್ಭುತ ಗೆಲುವಿನ ಹಿಂದೆ ಅವರ ವಿಜ್ಞಾನ ಶಿಕ್ಷಕರಾದ ಉತ್ಕಲ್ ಕೇಸರಿ ದಾಸ್ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ಮುದುಲಿಪಾಡ ಎಸ್ಎಸ್‌ಡಿ ಪ್ರೌಢಶಾಲೆಯಲ್ಲಿ ಮಂಗಳ ಅವರ ಶೈಕ್ಷಣಿಕ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕ ದಾಸ್, ಅವರಿಗೆ ನೀಟ್ ಪರೀಕ್ಷೆ ಬರೆಯಲು ಧೈರ್ಯ ತುಂಬಿದರು.

ಅಷ್ಟೇ ಅಲ್ಲದೆ, ಬಾಲೇಶ್ವರದಲ್ಲಿದ್ದ ಪ್ರಸಿದ್ಧ ಕೋಚಿಂಗ್ ಸೆಂಟರ್‌ಗೆ ಅವರನ್ನ ಕರೆದುಕೊಂಡು ಹೋಗಿ, ಅಧ್ಯಯನ ಸಾಮಗ್ರಿಗಳು ಮತ್ತು ಮೊಬೈಲ್ ಫೋನ್ ವ್ಯವಸ್ಥೆ ಮಾಡಿಕೊಟ್ಟರು. ಬಡತನದಲ್ಲಿದ್ದ ಯುವಕನ ಶ್ರದ್ಧೆ ಹಾಗೂ ಪ್ರತಿಭೆಯನ್ನು ಕಂಡ ಕೋಚಿಂಗ್ ಸಂಸ್ಥೆಯು ಸುಮಾರು 1.20 ಲಕ್ಷ ರೂಪಾಯಿಗಳ ಸಂಪೂರ್ಣ ತರಬೇತಿ ಶುಲ್ಕವನ್ನ ಮನ್ನಾ ಮಾಡಿ ಉಚಿತ ಶಿಕ್ಷಣ ನೀಡಿತು.

ಮೂಢನಂಬಿಕೆ ಬಿಡಿಸಿ ಗ್ರಾಮೀಣ ಆರೋಗ್ಯ ಸೇವೆ ನೀಡುವ ಸಂಕಲ್ಪ

ತಮ್ಮ ಈ ಸಾಧನೆಯ ಹಿಂದಿರುವ ನಿಜವಾದ ಉದ್ದೇಶವನ್ನು ಬಿಚ್ಚಿಟ್ಟ ಮಂಗಳ ಮುಡುಲಿ, "ನಮ್ಮ ಊರಿನಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳಿರಲಿಲ್ಲ. ಸಣ್ಣಪುಟ್ಟ ಕಾಯಿಲೆಗಳಿಗೂ ಜನರು ಮೈಲಿಗಟ್ಟಲೆ ನಡೆದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿತ್ತು. ಇನ್ನು ಕೆಲವರು ಆಸ್ಪತ್ರೆಗೆ ಹೋಗುವ ಬದಲು ಮೂಢನಂಬಿಕೆಯಿಂದ ನಾಟಿ ವೈದ್ಯರು ಹಾಗೂ ಮಾಂತ್ರಿಕರ ಮೊರೆ ಹೋಗುತ್ತಿದ್ದರು.

ಅನೇಕರು ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇದನ್ನಾ ಬದಲಾಯಿಸಿ, ನನ್ನ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕೆಂಬುದೇ ನನ್ನ ಏಕೈಕ ಗುರಿ" ಎಂದು ಭಾವುಕರಾಗಿ ನುಡಿದಿದ್ದಾರೆ. ಮಂಗಳ ಅವರ ಈ ಸಾಧನೆಗೆ ಇಡೀ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+