ಬಿಜೆಪಿಯೇತರ ಪಕ್ಷದ ಜೊತೆ ಮೈತ್ರಿ ಮಾತುಕತೆ, ಸಂಧಾನಕ್ಕೆ ಕಮಲ್ ನಾಥ್
ನವದೆಹಲಿ, ಮೇ 16: ಲೋಕಸಭೆ ಚುನಾವಣೆ ಫಲಿತಾಂಶ ಹತ್ತಿರವಾಗುತ್ತಿದ್ದಂತೆಯೇ ರಾಷ್ಟ್ರ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಅದರ ಭಾಗವಾಗಿ, ಎಲ್ಲಾ ಬಿಜೆಪಿಯೇತರ ಪಕ್ಷಗಳ ಮೈತ್ರಿಗಾಗಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಗುರುತರ ಜವಾಬ್ದಾರಿ ನೀಡಿದ್ದಾರೆ.
ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಮಲ್ ನಾಥ್ ಅವರು ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮೈತ್ರಿ ಮಾತುಕತೆ ನಡೆಸಲಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಬಹುಮತ ಪಡೆಯಲು ವಿಫಲರಾದರೆ ಎನ್ ಡಿಎಯೇತರ ಪಕ್ಷಗಳೇ ನಿರ್ಣಾಯಕರಾಗುತ್ತಾರೆ ಎಂಬುದು ಕಾಂಗ್ರೆಸ್ ನ ಲೆಕ್ಕಾಚಾರ. ಆದ್ದರಿಂದ ಈಗಲೇ ಆ ಎಲ್ಲಾ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಲು ಕಾಂಗ್ರೆಸ್ ಮುಂದಾಗಿದೆ.
ಕಮಲ್ ನಾಥ್ ಅವರ ಬಗ್ಗೆ ಸೋನಿಯಾ ಗಾಂಧಿ ಅವರು ಭಾರೀ ನಂಬಿಕೆ ಹೊಂದಿರುವ ಕಾರಣಕ್ಕೆ ಅವರಿಗೇ ಈ ಜವಾಬ್ದಾರಿ ನೀಡಲಾಗಿದೆ. ಮೇ 21 ರಂದು ಮಹಾಘಟಬಂಧನದ ಸದಸ್ಯ ಪಕ್ಷಗಳೆಲ್ಲವೂ ದೆಹಲಿಯಲ್ಲಿ ಸಭೆ ಸೇರಲಿದ್ದು, ಪ್ರಧಾನಿ ಅಭ್ಯರ್ಥಿ ಕುರಿತು ಚರ್ಚೆ ನಡೆಯಲಿದೆ. ಈ ಸಂದರ್ಭದಲ್ಲಿ ಮಹಾಘಟಬಂಧನದ ಶಕ್ತಿ ಪ್ರದರ್ಶನವೂ ನಡೆವ ಸಾಧ್ಯತೆ ಇದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications