ಮೋದಿ ವಿಚಾರಣೆಗೆ ಅಲಹಾಬಾದ್ ಜಡ್ಜ್ ನೇಮಕ
ನವದೆಹಲಿ, ಮೇ 3: ಈ ಹಿಂದೆ ಒಬ್ಬ ಯುವತಿಯ ಮೇಲೆ ಗುಜರಾತ್ ಸರಕಾರ ನಡೆಸಿದೆಯೆನ್ನಲಾದ ಕಣ್ಗಾವಲು ಪ್ರಕರಣದ (ಅಕ್ರಮ ಬೇಹುಗಾರಿಕೆ) ವಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ನ್ಯಾಯಾಂಗ ಆಯೋಗವನ್ನು ರಚಿಸಿದೆ. ಜತೆಗೆ, ಅಲಹಾಬಾದ್ ಹೈಕೋರ್ಟಿನ ಜಸ್ಟೀಸ್ ಶ್ರೀವಾತ್ಸವ ಅವರನ್ನು ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.
ಆದರೆ ಇದಕ್ಕೆ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಧನಂಜಯ ಯಶವಂತ್ ಚಂದ್ರಚೂಡ್ ಅವರು ಅನುಮೋದನೆ ನೀಡಬೇಕಿದೆ. ಈ ಮಧ್ಯೆ ಅಲಹಾಬಾದ್ ಹೈಕೋರ್ಟಿನಲ್ಲಿ ಶ್ರೀವಾತ್ಸವ ಹೆಸರಿನ ಇಬ್ಬರು ನ್ಯಾಯಮೂರ್ತಿಗಳಿದ್ದು, ಅವರಲ್ಲಿ ಯಾರನ್ನು ನೇಮಕ ಮಾಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಜಸ್ಟೀಸ್ ಬೃಜೇಶ್ ಕುಮಾರ್ ಶ್ರೀವಾತ್ಸವ ಅವರ ಸೇವಾವಧಿ 2015ರ ಡಿಸೆಂಬರ್ 31ಕ್ಕೆ ಮುಕ್ತಾಯವಾಗಲಿದೆ. ಅದೇ ಜಸ್ಟೀಸ್ ರಾಕೇಶ್ ಶ್ರೀವಾತ್ಸವ ಅವರು 2022ರ ಸೆಪ್ಟೆಂಬರ್ 28ಕ್ಕೆ ನಿವೃತ್ತರಾಗಲಿದ್ದಾರೆ. ಈ ಇಬ್ಬರಲ್ಲಿ ಯಾರು ಆಯೋಗದ ಮುಖ್ಯಸ್ಥರಾಗಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.

ನೀತಿ ಸಂಹಿತೆ ಉಲ್ಲಂಘನೆ ಆಗಲ್ಲ: ಚುನಾವಣೆ ಸಂದರ್ಭದಲ್ಲೇ ಗುಜರಾತ್ ಬೇಹುಗಾರಿಕೆಗೆ ಸಂಬಂಧಿಸಿದ ನ್ಯಾಯಾಂಗ ಆಯೋಗಕ್ಕೆ ನ್ಯಾಯಮೂರ್ತಿ ಅವರನ್ನು ನೇಮಿಸುವುದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲ್ಲ. ಇದು ಈಗ ತೆಗೆದುಕೊಂಡ ನಿರ್ಧಾರವೇನಲ್ಲ. ನಾಲ್ಕು ತಿಂಗಳ ಹಿಂದೆಯೇ (ಡಿಸೆಂಬರ್ 26ರಂದು) ಕೇಂದ್ರ ಸಚಿವ ಸಂಪುಟ ಈ ನಿರ್ಧಾರ ತೆಗೆದುಕೊಂಡಿತ್ತು. ಹಾಗಾಗಿ ಈ ನೇಮಕಕ್ಕೆ ಅಸ್ತು ಅನ್ನಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಆದರೆ ಸೇನಾ ಮುಖ್ಯಸ್ಥರ ನೇಮಕವನ್ನು ಮುಂದಿನ ಸರಕಾರದ ವಿವೇಚನೆಗೆ ಬಿಡುವಂತೆ ಆಯೋಗ ಸ್ಪಷ್ಟಪಡಿಸಿದೆ. ಹಾಲಿ ಸೇನಾ ಮುಖ್ಯಸ್ಥ ಬಿಕ್ರಂ ಸಿಂಗ್ ಅವರ ಸೇವಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ಹೊಸಬರ ನೇಮಕಕ್ಕೆ ಇನ್ನೂ ಕಾಲಾವಕಾಶವಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಆದರೆ ಚುನಾವಣೆ ಸಂದರ್ಭದಲ್ಲಿ ಹತಾಶೆಗೊಂಡಿರುವ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ದ್ವೇಷ ರಾಜಕಾರಣದಲ್ಲಿ ತೊಡಗಿದೆ ಎಂಬ ಮಾತುಗಳು ಕೇಳಿಬಂದಿವೆ. ಯುಪಿಎ ಮೈತ್ರಿ ಪಕ್ಷವಾದ ಸಮಾಜವಾದಿ ಪಕ್ಷದ ನಾಯಕರು ಚುನಾವಣೆ ಮುಗಿಯುವವರೆಗಾದರೂ ಕೇಂದ್ರ ಸರಕಾರ ಕಾಯಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಈ ಮಧ್ಯೆ ಮೋದಿಯನ್ನು ಪ್ರಕರಣದಲ್ಲಿ ಸಿಲುಕಿಸಬೇಕೆಂದು ಕೇಂದ್ರವು ಶತಾಯಗತಾಯ ಯತ್ನಿಸಿದ್ದು, ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳನ್ನು ಆಯೋಗದ ಮುಖ್ಯಸ್ಥರಾಗುವಂತೆ ಕೋರಿತ್ತು. ಆದರೆ ಯಾವೊಬ್ಬ ನಿವೃತ್ತ ಜಡ್ಜ್ ಸಹ ಆಯೋಗದ ಚುಕ್ಕಾಣಿ ಹಿಡಿಯಲು ಮುಂದೆ ಬಂದಿಲ್ಲ. ಹಾಗಾಗಿ ಕೇಂದ್ರ ಸರಕಾರ ಇದೀಗ ಹೈಕೋರ್ಟಿನ ಹಾಲಿ ಜಡ್ಜುಗಳತ್ತ ದೃಷ್ಟಿಹರಿಸಿದ್ದು, ಅಲಹಾಬಾದ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಧನಂಜಯ ಯಶವಂತ್ ಚಂದ್ರಚೂಡ್ ಅವರ ಮನವೊಲಿಕೆಗೆ ಯತ್ನಿಸಿದೆ ಎಂದು ಹೇಳಲಾಗಿದೆ.


Click it and Unblock the Notifications
