ಜೆಎನ್‌ಯು ವಿವಿಗೆ ಮೊದಲ ಬಾರಿಗೆ ಮಹಿಳಾ ಕುಲಪತಿ ನೇಮಕ
ನವದೆಹಲಿ, ಫೆಬ್ರವರಿ 7: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು) ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿಗಳನ್ನು ನೇಮಿಸಲಾಗಿದೆ. ಇದೇ ಮೊದಲ ಬಾರಿಗೆ ಮಹಿಳಾ ಕುಲಪತಿಯಾಗಿ ಸಾಂತಿಶ್ರೀ ಧೂಲಿಪುಡಿ ಪಂಡಿತ್ ಅವರನ್ನು ನೇಮಿಸಿ ಶಿಕ್ಷಣ ಸಚಿವಾಲಯ ಸೋಮವಾರ ಆದೇಶ ಹೊರಡಿಸಿದೆ.
ಜೆಎನ್‌ಯುವಿನ ಹಳೆ ವಿದ್ಯಾರ್ಥಿಯಾಗಿರುವ ಸಾಂತಿಶ್ರೀ ಅವರು ಅಂತಾರಾಷ್ಟ್ರೀಯ ವ್ಯವಹಾರ ವಿಷಯದಲ್ಲಿ ಪಿಎಚ್ ಡಿ, ಎಂ.ಫಿಲ್ ಪದವಿ ಪಡೆದಿದ್ದಾರೆ. ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿರುವ ಪಂಡಿತ್ ಅವರನ್ನು ಶಿಕ್ಷಣ ಸಚಿವಾಲಯ (MoE) ಸೋಮವಾರ ಉನ್ನತ ಹುದ್ದೆಗೆ ನೇಮಿಸಿದೆ.
ಕಳೆದ ಐದು ವರ್ಷಗಳ ಅವಧಿ ಮುಗಿದ ನಂತರ ಜೆಎನ್‌ಯುನಲ್ಲಿ ಹಂಗಾಮಿ ವಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ ಜಗದೇಶ್ ಕುಮಾರ್ ಅವರನ್ನು ಕಳೆದ ವಾರ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮುಂದಿನ ಐದು ವರ್ಷಗಳ ಅವಧಿಗೆ ಸಾಂತಿಶ್ರೀ ಅವರು ಕುಲಪತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

''ವಿಶ್ವವಿದ್ಯಾಲಯಕ್ಕೆ ಸಂದರ್ಶಕರಾಗಿರುವ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರನ್ನು ಜೆಎನ್‌ಯು ಉಪಕುಲಪತಿಯಾಗಿ ನೇಮಕ ಮಾಡಲು ಅನುಮೋದಿಸಿದ್ದಾರೆ. ಅವರ ನೇಮಕವು ಐದು ವರ್ಷಗಳ ಅವಧಿಗೆ ಆಗಿದೆ,'' ಎಂದು ಹಿರಿಯ MoE ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂತಿಶ್ರೀ ಪಂಡಿತ್ 1988 ರಲ್ಲಿ ಗೋವಾ ವಿಶ್ವವಿದ್ಯಾನಿಲಯದಿಂದ ತಮ್ಮ ಬೋಧನಾ ವೃತ್ತಿಯನ್ನು ಪ್ರಾರಂಭಿಸಿದರು ಮತ್ತು 1993 ರಲ್ಲಿ ಪುಣೆ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅವರು ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC), ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ (ICSSR) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಸಂದರ್ಶಕರ ನಾಮನಿರ್ದೇಶನದ ಸದಸ್ಯರಾಗಿದ್ದಾರೆ. ಅವರ ವೃತ್ತಿಜೀವನದಲ್ಲಿ, ಅವರು 29 ಪಿಎಚ್‌ಡಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.












Click it and Unblock the Notifications