ಪ್ರಭಾವ ಬಳಸಿ ಗಿರಗಿಟ್ಲೆಯಾಡಿಸುವ ಶಶಿಕಲಾ : ಆಚಾರ್ಯ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮೇ 04 : "ಕುಮಾರಿ ಜಯಲಲಿತಾ ಸ್ನೇಹಿತೆ, ನಂಬಿಗಸ್ತೆ ಶಶಿಕಲಾ ನಟರಾಜನ್ ಅಂತಿಂಥ ವ್ಯಕ್ತಿಯಲ್ಲ. ಎಐಎಡಿಎಂಕೆ ಪಕ್ಷದಲ್ಲಿ ಅತ್ಯಂತ ಪ್ರಭಾವಶಾಲಿ ಮಾತ್ರವಲ್ಲ, ತನ್ನ ಅಧಿಕಾರ ಬಳಸಿ ಎಲ್ಲರನ್ನೂ ಗಿರಗಿಟ್ಲೆಯಂತೆ ಆಡಿಸುತ್ತಾಳೆ. ಪೋಯೆಸ್ ಗಾರ್ಡನ್‌ನನ್ನು ಕೂಡ ತನ್ನ ಹಿಡಿತದಲ್ಲಿ ತೆಗೆದುಕೊಂಡಿದ್ದಾಳೆ."

ಹೀಗೆಂದು, ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಕ್ರಿಮಿನಲ್ ಮೊಕದ್ದಮೆಯಲ್ಲಿ ಎರಡನೇ ಆರೋಪಿ ಸ್ಥಾನದಲ್ಲಿರುವ ಶಶಿಕಲಾ ನಟರಾಜನ್ (59) ಅವರ 'ಪ್ರಭಾವಶಾಲಿ' ವ್ಯಕ್ತಿತ್ವವನ್ನು ಸರ್ವೋಚ್ಚ ನ್ಯಾಯಾಲಯದ ಮುಂದೆ ಬಣ್ಣಿಸಿದವರು ಕರ್ನಾಟಕದ ಪರ ವಾದಿಸುತ್ತಿರುವ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ವಿ. ಆಚಾರ್ಯ.

1991ರಿಂದ 1996ರವರೆಗೆ ಮುಖ್ಯಮಂತ್ರಿಯಾಗಿದ್ದಾಗ ಕು.ಜಯಲಲಿತಾ ಅವರು 66.65 ಕೋಟಿ ರು.ನಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಹೂಡಲಾಗಿರುವ ಪ್ರಕರಣದಲ್ಲಿ, ಜಯಲಲಿತಾ, ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ನಿರಪರಾಧಿ ಎಂದು ಕರ್ನಾಟಕ ಹೈಕೋರ್ಟ್ 2015ರ ಮೇನಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. [ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ]

Jayalalithaa DA case- Sasikala controls party and Poes Garden

ಈ ಮೇಲ್ಮನವಿಯಲ್ಲಿ ತಮ್ಮ ವಾದವನ್ನು ಮಂಡಿಸುತ್ತಿರುವ ರಾಜ್ಯಪರ ವಕೀಲ ಬಿ.ವಿ. ಆಚಾರ್ಯ ಅವರು, 'ಚಿನ್ನಮ್ಮ' ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಶಶಿಕಲಾ, ಎಐಎಡಿಎಂಕೆ ಪಕ್ಷವನ್ನು ಮತ್ತು ಜಯಾ ನಿವಾಸ ಪೋಯೆಸ್ ಗಾರ್ಡನ್ ಅನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ ಎಂದು ವಿವರಣೆ ನೀಡಿದರು.

ಮೂರು ಬಾರಿ ಜಯಲಲಿತಾ ಮುಖ್ಯಮಂತ್ರಿಯಾದಾಗಲೂ ಹಿಂದೆ ನಿಂತು ಅಧಿಕಾರ ಚಲಾಯಿಸುತ್ತಿದ್ದವರು ಶಶಿಕಲಾ. ಇಂಥವಳನ್ನು ಜಯಲಲಿತಾನೇ 2011ರ ಡಿಸೆಂಬರ್ ನಲ್ಲಿ ಪಕ್ಷದಿಂದ ಕಿತ್ತು ಬಿಸಾಡಿದ್ದರು. ಆದರೆ, ಶಶಿಕಲಾನೇ ಕುಟುಂಬದ ಜೊತೆ ತನ್ನೆಲ್ಲ ಸಂಬಂಧವನ್ನು ಕಡಿದುಕೊಂಡಿದ್ದರಿಂದ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದ್ದರು.

ವಿಶೇಷ ನ್ಯಾಯಾಲಯದ ತೀರ್ಪು : ಇಂಥ ರಾಜಕೀಯ, ವೈಯಕ್ತಿಕ ಸಂಬಂಧವುಳ್ಳ ಜಯಲಲಿತಾ, ಶಶಿಕಲಾ ಮತ್ತಿತರರ ವಿರುದ್ಧ ಆರೋಪ ಸಾಬೀತಾದ ಕಾರಣ ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯ 2014ರ ಸೆಪ್ಟೆಂಬರ್ 27ರಂದು ನಾಲ್ವರಿಗೂ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಅಲ್ಲದೆ, ಜಯಲಲಿತಾಗೆ 100 ಕೋಟಿ ರು. ದಂಡ ನೀಡಬೇಕೆಂದೂ ತೀರ್ಪುತ್ತು. [ಅಮ್ಮನ ಜೈಲಿಗೆ ಕಳುಹಿಸಿದ ಕುಡ್ಲದ ನ್ಯಾ.ಕುನ್ಹಾ]

ಅಕ್ರಮ ಹಣವನ್ನು ಸಕ್ರಮ ಮಾಡಲು ಶಶಿಕಲಾ ನಟರಾಜನ್ ಹೆಸರಿನಲ್ಲಿ ಅನೇಕ ಕಂಪನಿಗಳನ್ನು ಸ್ಥಾಪಿಸಲಾಗಿತ್ತು. ಇಂಥ ಹಿನ್ನೆಲೆಯುಳ್ಳ ಶಶಿಕಲಾ ವಿರುದ್ಧದ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ತಿರುವುಮುರುವು ಮಾಡಬೇಕು ಮತ್ತು ಎಲ್ಲ ನಾಲ್ವರ ವಿರುದ್ಧ ನೀಡಿದ ಜೈಲುಶಿಕ್ಷೆಯನ್ನು ಎತ್ತಿಹಿಡಿಯಬೇಕು ಎಂದು ಆಚಾರ್ಯ ವಾದಿಸಿದ್ದಾರೆ. ಗುರುವಾರವೂ ವಾದ ಮುಂದುವರಿಸಲಿದ್ದಾರೆ. [ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Special public prosecutor for Karnataka B V Acharya told the Supreme Court of India that Sasikala Natrajan is the person with the ultimate power. Sasikala an aide of Tamil Nadu chief minister J Jayalalithaa is an accused in the disproportionate assets case.
Please Wait while comments are loading...