ಆಂಧ್ರ ವಿಭಜನೆ ವಿರೋಧಿ ಹೋರಾಟಕ್ಕೆ ಗೌಡರ ಬೆಂಬಲ
ನವದೆಹಲಿ, ಡಿ. 10 : ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯ ರಚಿಸುವ ನಿರ್ಧಾರವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಿರೋಧಿಸಿದ್ದಾರೆ. ಈ ಕುರಿತು ವೈಎಸ್‌ಆರ್ ಪಕ್ಷದ ಮುಖ್ಯಸ್ಥ ಜಗನ್ ನಡೆಸುತ್ತಿರುವ ಹೋರಾಟಕ್ಕೆ ದೇವೇಗೌಡರು ಬೆಂಬಲ ಸೂಚಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ರಾಜ್ಯ ವಿಭಜನೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ನವೆದೆಹಲಿಯಲ್ಲಿ ಸೋಮವಾರ ವೈಎಸ್‌ಆರ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ, ಆಂಧ್ರ ವಿಭಜನೆಯ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಸುಮಾರು ಒಂದು ಗಂಟೆಗಳ ಮಾತುಕತೆಯಲ್ಲಿ ರೆಡ್ಡಿ ಆಂಧ್ರಪ್ರದೇಶವನ್ನು ವಿಭಜಿಸುವ ಹಿಂದಿರುವ ಕುತಂತ್ರಗಳನ್ನು ದೇವೇಗೌಡರಿಗೆ ವಿವರಿಸಿದರು.

ಉಭಯ ನಾಯಕರ ಭೇಟಿಯ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಜಗ ಮೋಹನ್ ರೆಡ್ಡಿ ಮತ್ತು ದೇವೇಗೌಡ, ರಾಜಕೀಯ ಲಾಭಕ್ಕಾಗಿ ರಾಜ್ಯ ರಚನೆ, ವಿಭಜನೆ ಮುಂತಾದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುವುದು ಸರಿಯಲ್ಲ, ತಾವು ಆಂಧ್ರ ಪ್ರದೇಶ ವಿಭಜನೆ ಪ್ರಸ್ತಾಪವನ್ನು ವಿರೋಧಿಸುವುದಾಗಿ ದೇವೇಗೌಡರು ಹೇಳಿದರು.
ನಂತರ ಮಾತನಾಡಿದ ಜಗನ್, ದೇವೇಗೌಡರ ಬೆಂಬಲದಿಂದ ಆಂಧ್ರ ವಿಭಜನೆ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ಬಂದಿದೆ. ಕೊನೆ ಉಸಿರು ಇರುವವರೆಗೂ ಆಂಧ್ರ ವಿಭಜನೆಯನ್ನು ವಿರೋಧಿಸಲಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದ ಒಂದು ಕ್ಷೇತ್ರದಲ್ಲೂ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗುವುದಿಲ್ಲ ಎಂದರು. (ತೆಲಂಗಾಣ ರಚನೆ, ಜಗನ್ ಉಪವಾಸ ವ್ರತ)
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೂರನೇ ರಂಗ ಅಥವ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯೋಚನೆ ಇಲ್ಲ. ಆಂಧ್ರಪ್ರದೇಶದ ಜನರ ಹಿತದೃಷ್ಠಿಯಿಂದ ತೆಲಂಗಾಣ ರಾಜ್ಯ ರಚನೆ ಪ್ರಸ್ತಾಪ ವಿರೋಧಿಸುತ್ತಿದ್ದೇವೆ ಎಂದು ಜಗನ್ ತಿಳಿಸಿದರು. ಸಮಾನ ಮನಸ್ಕ ಪಕ್ಷಗಳ ಬೆಂಬಲವನ್ನು ಪಡೆಯುತ್ತೇನೆ. ಆಗ ಹೋರಾಟಕ್ಕೆ ಹೆಚ್ಚಿನ ಬಲ ಬರುತ್ತದೆ ಎಂದು ಅವರು ಹೇಳಿದರು.











Click it and Unblock the Notifications