30ಕ್ಕೂ ಹೆಚ್ಚು ಬೇನಾಮಿ ಲಾಕರ್ ಪತ್ತೆ, ಕೋಟಿಗಟ್ಟಲೆ ಹಣ ವಶ
ನವದೆಹಲಿ, ಡಿಸೆಂಬರ್ 03 : ಆದಾಯ ತೆರಿಗೆ ಇಲಾಖೆ ದೆಹಲಿಯಲ್ಲಿ ಖಾಸಗಿ ಕಂಪನಿಯೊಂದಕ್ಕೆ ಸೇರಿದ ಕನಿಷ್ಠ 30 ಬೇನಾಮಿ ಲಾಕರ್ ಗಳನ್ನು ಪತ್ತೆಹಚ್ಚಿದೆ. ದೆಹಲಿಯ ಚಾಂದನಿ ಚೌಕ್ ನಲ್ಲಿ ನಡೆಸಲಾದ ಐಟಿ ದಾಳಿಯ ಸಂದರ್ಭದಲ್ಲಿ ಬೇನಾಮಿ ಬ್ಯಾಂಕ್ ಲಾಕರ್ ಗಳನ್ನು ಪತ್ತೆ ಮಾಡಲಾಗಿದೆ.
2016ರ ಆಗಸ್ಟ್ ನಲ್ಲಿ ಬೇನಾಮಿ ವ್ಯವಹಾರ (ನಿರ್ಬಂಧ) ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೇನಾಮಿ ಲಾಕರ್ ಗಳನ್ನು ಪತ್ತೆ ಹಚ್ಚಲಾಗಿದೆ. ಯಾವುದೇ ವಿಧಾನದಿಂದ ಚರಾಸ್ಥಿ ಅಥವಾ ಸ್ಥಿರಾಸ್ತಿಯನ್ನು ಪಡೆದುಕೊಂಡಿರಲಿ, ಬೇನಾಮಿ ವ್ಯವಹಾರವನ್ನು ಮಾಡುವಂತಿಲ್ಲ ಎಂದು ನಿರ್ಬಂಧವನ್ನು ಕಾಯ್ದೆ ಹೇರಿದೆ.
ವಿದೇಶದಲ್ಲಿ ಕಾನೂನುಬಾಹಿರ ಆಸ್ತಿ ಮಾಡಿದ ಭಾರತೀಯರ ಮೇಲೆ ಐಟಿ ಕಣ್ಣು
ಈ ಬೇನಾಮಿ ಲಾಕರ್ ಗಳಿಂದ ಈಗಾಗಲೆ 10 ಕೋಟಿಗೂ ಹೆಚ್ಚು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆದಾಯ ತೆರಿಗೆ ದಾಳಿ ಇನ್ನೂ ಹತ್ತು ದಿನ ನಡೆಯಲಿದ್ದು, ಈ ಮೊತ್ತ ಇನ್ನೂ ಹೆಚ್ಚಲಿದೆ ಎಂದು ಎಎನ್ಐಗೆ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು ಪರಿಶೀಲಿಸಲಾದ 300 ಲಾಕರ್ ಗಳಲ್ಲಿ 120 ಲಾಕರ್ ಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ 25 ಕೋಟಿ ನಗದು ಇರುವುದು ಪತ್ತೆಯಾಗಿದೆ. ಈ ಲಾಕರ್ ಗಳನ್ನು ಹಳೆಯ ಉದ್ಯೋಗಿಗಳು, ಸದ್ಯ ಕೆಲಸ ಮಾಡುತ್ತಿರುವವರು ಮತ್ತು ಲಾಕರ್ ಮಾಲಿಕರ ಬಂಧುಗಳ ಹೆಸರಿನಲ್ಲಿ ತೆರೆಯಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 05ರಿಂದ ಪ್ಯಾನ್ ಕಾರ್ಡಿನಲ್ಲಿ ತಂದೆ ಹೆಸರು ಕಡ್ಡಾಯವಲ್ಲ
ವಿಚಾರಣೆಯ ಸಂದರ್ಭದಲ್ಲಿ, ತಾವು ಹಿಂದೆ ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದು, ಆದರೆ ತಮ್ಮ ಹೆಸರಿನಲ್ಲಿ ಬೇನಾಮಿ ಲಾಕರ್ ತೆರೆಯಲಾಗಿರುವುದರ ಬಗ್ಗೆ ತಮಗೇನೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಹಿಂದೆ ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಕೆಲ ದಾಖಲೆಗಳನ್ನು ನೀಡಿದ್ದು, ಆ ದಾಖಲೆಗಳನ್ನು ಬಳಸಿ ಲಾಕರ್ ತೆರೆಯಲಾಗಿರಬಹುದು ಎಂದಿದ್ದಾರೆ.
ಈ ದಾಳಿಯ ಸಂದರ್ಭದಲ್ಲಿ ಒಂದು ಲ್ಯಾಪ್ ಟಾಪ್ ಮತ್ತು ಮತ್ತು ಒಂದು ರಿಜಿಸ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಲಾಕರ್ ನಲ್ಲಿ ಹಣ ಇಡಲು ಅಥವಾ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ರಿಜಿಸ್ಟರ್ ನಲ್ಲಿ ನಮೂದಿಸಬೇಕಾಗಿತ್ತು. ಅಲ್ಲಿ ನಮೂದಿಸಲಾದ ಹೆಸರುಗಳ ವ್ಯಕ್ತಿಗಳನ್ನು ವಿಚಾರಿಸಿದಾಗ ಅವ್ಯವಹಾರ ನಡೆದಿರುವುದು ತಿಳಿದುಬಂದಿದೆ. ಕೆಲವರು ವಿಚಾರಣೆಗೆ ಬರದಿದ್ದಾಗ ಅವರ ಹೆಸರಲ್ಲಿದ್ದ ಲಾಕರ್ ಅನ್ನು ಒಡೆದು ಅಲ್ಲಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಾರತದಲ್ಲಿ ಕರೋಡ್ ಪತಿಗಳ ಸಂಖ್ಯೆ ಶೇ 60ರಷ್ಟು ಹೆಚ್ಚಳ, ಏನಿದು ಜಾದೂ?
ಹವಾಲಾ ದಂಧೆಯಲ್ಲಿ ತೊಡಗಿದ್ದ ಆ ಸಂಸ್ಥೆಯ ಹಲವರು ಅಲ್ಲಿ ಕೆಲಸ ಮಾಡುತ್ತಿದ್ದ ಹಾಲಿ ಮತ್ತು ಮಾಜಿ ಉದ್ಯೋಗಿಗಳ ಹೆಸರುಗಳಲ್ಲಿ ಒಂದಕ್ಕಿಂತ ಹೆಚ್ಚು ಬೇನಾಮಿ ಲಾಕರ್ ಗಳನ್ನು ತೆರೆದಿದ್ದರು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !