ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್‌ಗೆ ನೀರು ಕುಡಿಸಿದ ಚುನಾವಣಾ ಆಯೋಗ

By Prasad
|
Google Oneindia Kannada News

ನವದೆಹಲಿ, ನ. 13 : ಮುಜಫರ್ ನಗರ ಕೋಮುಗಲಭೆಯ ಸಂತ್ರಸ್ತರನ್ನು ಪಾಕಿಸ್ತಾನದ ಐಎಸ್ಐ ನೇಮಕ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ಭಾಷಣವೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಕ್ಕೆ ಬುಧವಾರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಚುನಾವಣಾ ಆಯೋಗ, ಮುಂದೆ ಇಂಥ ಮಾತುಗಳನ್ನಾಡದಂತೆ ತಾಕೀತು ಮಾಡಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಭಾಷಣ ಮಾಡುವಾಗ ಎಚ್ಚರಿಕೆಯ ಮಾತುಗಳನ್ನಾಡಬೇಕು ಎಂದು ಆಯೋಗ ರಾಹುಲ್ ಅವರಿಗೆ ಸಲಹೆ ನೀಡಿದೆ. ರಾಹುಲ್ ಅವರ ಮಾತುಗಳು ಚುನಾವಣಾ ನೀತಿ ಸಂಹಿತೆಯ ಪಾವಿತ್ರ್ಯತೆಗೆ ವಿರುದ್ಧವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಹಾಗೆಯೆ, ಅವರು ನೀಡಿದ ಉತ್ತರ ತೃಪ್ತಿ ತಂದಿಲ್ಲ ಎಂದು ಕೂಡ ಹೇಳಿದೆ.

ಎರಡು ಕೋಮುಗಳ ನಡುವೆ ಭಿನ್ನಾಭಿಪ್ರಾಯ ಅಥವಾ ದ್ವೇಷ ಹುಟ್ಟುಹಾಕುವಂತಹ ಮಾತುಗಳನ್ನಾಡುವುದನ್ನು ಚುನಾವಣಾ ಆಯೋಗ ಸಹಿಸುವುದಿಲ್ಲ. ಅದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಅಲ್ಲದೆ, ಯಾವುದೇ ಆರೋಪಗಳನ್ನು ದೃಢಪಡಿಸಿಕೊಳ್ಳದೆ ಇತರ ರಾಜಕೀಯ ಪಕ್ಷಗಳ ವಿರುದ್ಧ ಹರಿಹಾಯುವುದು ಕೂಡ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ಆಯೋಗ ತರಾಟೆಗೆ ತೆಗೆದುಕೊಂಡಿದೆ.

ISI remark : Election commission warns Rahul Gandhi

ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಅವರು ಮಾಡಿದ ಭಾಷಣದಲ್ಲಿ ಹಿಂದೂ-ಮುಸ್ಲಿಂ, ಹಿಂದೂ-ಸಿಖ್ ಜನಾಂಗದ ನಡುವೆ ದ್ವೇಷ ಬಿತ್ತುವಂತಹ, ಕೋಮುಗಲಭೆಯನ್ನು ಪ್ರೇರೇಪಿಸುವಂತಹ ಮಾತುಗಳನ್ನಾಡಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು ಎಂದು ಭಾರತೀಯ ಜನತಾ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಮಧ್ಯಪ್ರದೇಶದ ಇಂದೋರ್ ದಲ್ಲಿ ಮಾಡಿದ ಭಾಷಣದಲ್ಲಿ, ಮುಜಫರ್ ನಗರದಲ್ಲಿ ನಡೆದ ಕೋಮು ಗಲಭೆಯ ಸಂತ್ರಸ್ತರನ್ನು ಸಂಪರ್ಕಿಸಲು ಪಾಕಿಸ್ತಾನದ ಐಎಸ್ಐ ಯತ್ನಿಸುತ್ತಿದೆ ಎಂದು ರಾಹುಲ್ ಮಾಡಿದ ಭಾಷಣಕ್ಕೆ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ರಾಜಸ್ತಾನದ ಚುರುನಲ್ಲಿ ಕೂಡ ಇದೇ ವಿಷಯವನ್ನು ಮತ್ತೆ ಪ್ರಸ್ತಾಪಿಸಿದ್ದರು. ಮುಜಫರ್ ನಗರದ ಯುವಕರು ಪಾಕಿಸ್ತಾನಿ ಪ್ರಲೋಭನೆಯಿಂದ ದೂರವಿರಬೇಕು ಎಂದಿದ್ದರು.

"ಹಿಂದೂ ಮತ್ತು ಮುಸ್ಲಿಂ ನಡುವೆ ತಂದಿಡದಿದ್ದರೆ ಉತ್ತರಪ್ರದೇಶದಲ್ಲಿ ಚುನಾವಣೆ ಗೆಲ್ಲಲಾಗುವುದಿಲ್ಲ ಎಂಬುದು ಬಿಜೆಪಿಗೆ ತಿಳಿದಿದೆ. ಚುನಾವಣೆಯಲ್ಲಿ ಗೆಲ್ಲುತ್ತೇವೆಂಬ ಆಶಯದಿಂದ ಎಲ್ಲಿ ಹೋದಲ್ಲಿ ಬೆಂಕಿ ಹಚ್ಚುವುದೇ ಆ ಪಕ್ಷದ ಕೆಲಸ. ಯುಪಿನಲ್ಲಿ, ಗುಜರಾತ್ ನಲ್ಲಿ, ಕಾಶ್ಮೀರದಲ್ಲಿ, ಮುಜಫರ್ ನಗರದಲ್ಲಿ ಬೆಂಕಿ ಹಚ್ಚಿದ್ದಾರೆ. ಆ ಬೆಂಕಿಯನ್ನು ನಂದಿಸುವ ಕೆಲಸ ಕಾಂಗ್ರೆಸ್ ಪಕ್ಷವೇ ಮಾಡಬೇಕಾಗುತ್ತದೆ. ಇದರಿಂದ ದೇಶಕ್ಕೆ ಧಕ್ಕೆ ಆಗುತ್ತದೆಂದು ಬಿಜೆಪಿಗೆ ತಿಳಿದಿಲ್ಲ" ಎಂದು ರಾಹುಲ್ ಭಾಷಣವೊಂದರಲ್ಲಿ ಕಿಡಿ ಕಾರಿದ್ದರು.

English summary
Election commission of India has warned Congress Vice-president Rahul Gandhi over his ISI remarks and has advised him to be careful while making election speeches. Rahul in his speech had made remarks linking Pakistan ISI with Muzaffarnagar riot victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X