ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರಾ?
ನವದೆಹಲಿ, ಡಿ. 10 : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗಿಟ್ಟಿಸಿ ದೇಶದ ಜನರ ಕಣ್ಣಗೆ 'ಹೀರೋ' ಆಗಿ ಕಾಣಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ಇತರ ಧುರೀಣರ ಮಾತುಗಳಿಗೆ ಮನ್ನಣೆ ಕೊಡದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರಾ? ಆರಂಭದಲ್ಲಿ ಶೂರತ್ವ ಮೆರೆದರೂ ಮುಂದೆ ತಮ್ಮ ಅವನತಿಗೆ ಅವರೇ ಮುನ್ನುಡಿ ಬರೆಯುತ್ತಿದ್ದಾರಾ?
ಅರವಿಂದ್ ಕೇಜ್ರಿವಾಲ್ ಅವರ ನಡವಳಿಕೆಗಳು ಈ ಪ್ರಶ್ನೆಗಳಿಗೆ ಸಾಕಷ್ಟು ಉತ್ತರಗಳನ್ನು ನೀಡುತ್ತಿವೆ. ಆಮ್ ಆದ್ಮಿ ಪಕ್ಷದ ಮತ್ತೊಬ್ಬ ನಾಯಕ ಪ್ರಶಾಂತ್ ಭೂಷಣ್ ಅವರು ನೀಡಿದ್ದ ಹೇಳಿಕೆಗೆ ಅವರು ಮಾತ್ರ ಬಾಧ್ಯರು, ಇದಕ್ಕೆ ಪಕ್ಷದ ಹೇಳಿಕೆಯಲ್ಲ ಎಂದು ಖಡಾಖಂಡಿತವಾಗಿ ಹೇಳಿ ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳನ್ನು ತಾವೇ ಬಯಲಿಗೆ ಎಳೆದಿದ್ದಾರೆ.
ಪ್ರಶಾಂತ್ ಭೂಷಣ್ ಹೇಳಿದ್ದೇನೆಂದರೆ, "ಭಾರತೀಯ ಜನತಾ ಪಕ್ಷ ಆಮ್ ಆದ್ಮಿ ಪಕ್ಷದಂತೆಯೇ ಚಿಂತನೆ ನಡೆಸಿದರೆ, ಎಎಪಿ ನಂಬಿದ ತತ್ತ್ವಗಳನ್ನು ಬೆಂಬಲಿಸಿದರೆ, ಜನ ಲೋಕಪಾಲ್ ಮಸೂದೆ ಮಂಡನೆಗೆ ಸಹಕರಿಸುವುದಾಗಿ ಲಿಖಿತ ಹೇಳಿಕೆ ಕೊಟ್ಟರೆ ಅವರನ್ನು ಬೆಂಬಲಿಸುತ್ತೇವೆ. ಆದರೆ, ಬಿಜೆಪಿ ಎಎಪಿಯಂತೆ ಆಗುವುದು ಸಾಧ್ಯವಿಲ್ಲವಾದ್ದರಿಂದ ಹೊಂದಾಣಿಕೆಯೂ ಸಾಧ್ಯವಿಲ್ಲ." [ವ್ಯವಸ್ಥೆಯನ್ನೇ ಬದಲಾಯಿಸುತ್ತೇನೆ]

ದೆಹಲಿಯಲ್ಲಿ ಬಿಜೆಪಿ 32 ಮತ್ತು ಎಎಪಿ 28 ಸ್ಥಾನಗಳನ್ನು ಗೆದ್ದಿರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಬಗೆಹರಿಸುವ ಯಾವ ಸೂತ್ರಗಳು ಗೋಚರವಾಗುತ್ತಿಲ್ಲ. ಅರವಿಂದ್ ಕೇಜ್ರಿವಾಲ್ ಅವರ ಹಠಮಾರಿತನ ಬಿಜೆಪಿ ಮತ್ತು ಎಎಪಿ ಎರಡೂ ಪಕ್ಷಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಕಾರಣದಿಂದಾಗಿ ಬಿಜೆಪಿ ಕೂಡ ಯಾವುದಕ್ಕೂ ಕಮಿಟ್ ಆಗದೆ ತಟಸ್ಥ ನೀತಿ ತಾಳಿದೆ.
ಸುಪ್ರೀಂ ಕೋರ್ಟ್ ವಕೀಲರೂ ಆಗಿರುವ ಪ್ರಶಾಂತ್ ಭೂಷಣ್ ಅವರು, ಬಿಜೆಪಿಯೊಂದಿಗೆ ವಿಷಯಾಧಾರಿತ ಹೊಂದಾಣಿಕೆ ಮಾಡಿಕೊಳ್ಳಲು ಆಮ್ ಆದ್ಮಿ ಪಕ್ಷ ಸಿದ್ಧವಿದೆ ಎಂದು ನೀಡಿದ್ದ ಹೇಳಿಕೆ ಕೇಜ್ರಿವಾಲ್ ಅವರನ್ನು ಸಾಕಷ್ಟು ಕೆರಳಿಸಿದೆ. ಇದು ಭೂಷಣ್ ಅವರ ವೈಯಕ್ತಿಕ ಹೇಳಿಕೆ ಎಂದಿದ್ದ ಕೇಜ್ರಿವಾಲ್, ಬೇಕಿದ್ದರೆ ಭ್ರಷ್ಟಾಚಾರವನ್ನು ಒಟ್ಟಾಗಿಯೇ ಮಾಡುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಒಟ್ಟಾಗಿಯೇ ಸರಕಾರ ರಚಿಸಲಿ ಎಂದು ಉದ್ಧಟತನದ ಹೇಳಿಕೆ ನೀಡಿದ್ದರು.
ತಮಗೆ ಮತ ನೀಡಿ ಗೆಲ್ಲಿಸಿದ ದೆಹಲಿ ನಾಗರಿಕ ದೃಷ್ಟಿಯಿಂದ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸರಕಾರ ರಚಿಸಬೇಕು ಎಂದು ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ನೀಡಿದ್ದ ಉಪದೇಶಕ್ಕೆ ಅರವಿಂದ್ ಕೇಜ್ರಿವಾಲ್ ಕವಡೆ ಕಾಸಿನ ಕಿಮ್ಮತ್ತು ಕೂಡ ನೀಡಿಲ್ಲ. ಬದಲಾಗಿ, ಮತ್ತೊಂದು ಚುನಾವಣೆ ಎದುರಿಸಲು ಎಎಪಿ ಸಿದ್ಧವಿದೆ ಎಂದು ಹೇಳಿಕೆ ನೀಡಿದ್ದಾರೆ. ಜನ ಲೋಕಪಾಲ್ ಮಸೂದೆ ಮಂಡನೆಯಾಗಬೇಕು ಎಂದು ಡಿ.10ರಿಂದ ಮತ್ತೆ ಉಪವಾಸ ಕುಳಿತಿರುವ ಅಣ್ಣಾ ಹಜಾರೆ ಮತ್ತೊಂದು ಚುನಾವಣೆ ಎದುರಿಸುವುದು ಒಳಿತು ಎಂದಿದ್ದಾರೆ. [ಕಿರಣ್ ಬೇಡಿ ಮಾತಿಗೆ ಕಿವಿಗೊಡುವರೆ?]
ಇಲ್ಲಿ ಸಿಕ್ಕ ಅತ್ಯುತ್ತಮ ಅವಕಾಶವನ್ನು ಯಾವುದಾದರೂ ದಾರಿ ಬಳಸಿ ರಾಜಕೀಯಕ್ಕಾಗಿ ಉಪಯೋಗಿಕೊಳ್ಳಬೇಕು ಎಂದಲ್ಲ. ಆದರೆ, ಜನರೇ ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದಿರುವುದು ಎಷ್ಟು ಸರಿ ಎಂದು ಅವರಿಗೆ ಮತ ಹಾಕಿದವರೇ ಆಡಿಕೊಳ್ಳುತ್ತಿದ್ದಾರೆ. ಹೋಗಲಿ, ಭ್ರಷ್ಟಾಚಾರ ಮತ್ತು ಅತ್ಯಾಚಾರಗಳಿಂದ ಬಸವಳಿದಿರುವ ದೆಹಲಿ ಜನರು ಮತ್ತೊಂದು ಚುನಾವಣೆಗೆ ಸಿದ್ಧರಿದ್ದಾರಾ? ಮತ್ತೆ ಚುನಾವಣೆ ಬಂದರೂ ಎಎಪಿಗೇ ಮತ ಹಾಕಲಿದ್ದಾರಾ? ಮತ್ತೊಂದು ಚುನಾವಣೆಯನ್ನು ಜನತೆಯ ಮೇಲೆ ಕೇಜ್ರಿವಾಲ್ ಅವರೇ ಹೇರಿದಂತಾಗುವುದಿಲ್ಲವೆ? [ಅಣ್ಣಾ ಮತ್ತೆ ನಿರಶನ]
ನಾನು ರಾಜಕೀಯವಾಗಿ ಸೋತರೂ ಸರಿ ಎಲ್ಲಿ ತಪ್ಪುಗಳನ್ನು ಮಾಡುತ್ತೇನೋ ಎಂಬ ಹೆದರಿಕೆ ಎಂದು ಸಂದರ್ಶನವೊಂದರಲ್ಲಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದರು. ಆದರೆ, ಅವರು ಈಗ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ, ಎಷ್ಟು ತಪ್ಪು? ಕಾಂಗ್ರೆಸ್ಸನ್ನು ಸದೆಬಡಿದು ರಾಜಕೀಯದಲ್ಲಿ ಸಂಚಲನ ಎಬ್ಬಿಸಿದ್ದಾರೆ ಅರವಿಂದ್ ಎಂಬುದರಲ್ಲಿ ಎರಡು ಮಾತೇ ಇಲ್ಲ. ಭ್ರಷ್ಟಾಚಾರವನ್ನು ವಿರೋಧಿಸುತ್ತಿರುವವರಲ್ಲಿ ಈ ವಿಜಯ ಭಾರೀ ಸ್ಫೂರ್ತಿಯನ್ನು ತುಂಬಿರಲೂಬಹುದು. ಭ್ರಷ್ಟಾಚಾರವನ್ನು ಮಟ್ಟಹಾಕಲು ಇಂಥದೊಂದು ಕ್ರಾಂತಿ ಖಂಡಿತ ಹುಟ್ಟಬೇಕಾಗಿತ್ತು, ಹುಟ್ಟಿದೆ.
ಜನರು ತಮ್ಮ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಂಡು, ರಾಜಕೀಯದಲ್ಲಿದ್ದುಕೊಂಡೇ ರಾಜಕೀಯ ವ್ಯವಸ್ಥೆಯನ್ನು ಬದಲಿಸಬೇಕಾದ ಅನಿವಾರ್ಯತೆ ಮತ್ತು ಜವಾಬ್ದಾರಿ ಈಗ ಅರವಿಂದ್ ಕೇಜ್ರಿವಾಲ್ ಮೇಲಿದೆ. ಇದೇ ಸಮಯದಲ್ಲಿ ಅವರು, ತಮ್ಮ ಹಿತೈಷಿಗಳು ಹೇಳುವ ಕಿವಿಮಾತುಗಳಿಗೆ ಕಿವಿಯಾಗುವ ಅವಶ್ಯಕತೆಯೂ ಇದೆ. ಇಂಥದೊಂದು ಕ್ರಾಂತಿ ಇಡೀ ದೇಶಕ್ಕೆ ಹಬ್ಬುವ ಜೊತೆಗೆ ಇತರ ರಾಜಕೀಯ ಪಕ್ಷಗಳಿಗೂ ಮಾದರಿಯಾಗಬೇಕು ಎಂದು ರಾಜಕೀಯ ಪಂಡಿತರು ತಿಳಿ ಹೇಳುತ್ತಿದ್ದಾರೆ. ಅವನ್ನು ಕೇಳಿಸಿಕೊಳ್ಳುವ ವ್ಯವಧಾನವಿರಬೇಕು ಅರವಿಂದ್ ಕೇಜ್ರಿವಾಲ್ ಅವರಿಗೆ.












Click it and Unblock the Notifications