ಚಿದಂಬರಂಗೆ ಮತ್ತೆ ಸಂಕಷ್ಟ: ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಜಾ
ನವದೆಹಲಿ, ಆಗಸ್ಟ್ 26: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಸಿಬಿಐ ವಶದಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯುಂಟಾಗಿದೆ.
ದೆಹಲಿ ಹೈಕೋರ್ಟ್ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರಾಕರಿಸಿದ್ದರ ವಿರುದ್ಧ ಚಿದಂಬರಂ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. 'ನಿಮ್ಮ ಬಂಧನವಾಗಿರುವುದರಿಂದ ಈ ಅರ್ಜಿಯನ್ನು ಮಾನ್ಯಮಾಡಲು ಸಾಧ್ಯವಿಲ್ಲ' ಎಂದು ನ್ಯಾಯಪೀಠ ಹೇಳಿದೆ.
Recommended Video
ಜತೆಗೆ ಚಿದಂಬರಂ ಅವರು ಸಾಮಾನ್ಯ ಜಾಮೀನು ಅರ್ಜಿಗಾಗಿ ಸಂಬಂಧಪಟ್ಟ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೇಳಿತು.

ಈ ಪ್ರಕರಣದಲ್ಲಿ ಪಿ. ಚಿದಂಬರಂ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಹೀಗಾಗಿ ಅವರ ಬಂಧನಕ್ಕೆ ಸಿಬಿಐ ಮುಂದಾಗಿತ್ತು. ಆಗಸ್ಟ್ 21ರಂದು ಚಿದಂಬರಂ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಅದು ವಿಚಾರಣೆಗೆ ಬಂದಿರಲಿಲ್ಲ. ಹೀಗಾಗಿ ಸಂಜೆ ನಡೆದ ಸಿನಿಮೀಯ ಬೆಳವಣಿಗೆಯಲ್ಲಿ ಸಿಬಿಐ ಅಧಿಕಾರಿಗಳು ಪಿ. ಚಿದಂಬರಂ ಅವರನ್ನು ಬಂಧಿಸಿದ್ದರು.
ಮರುದಿನ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪಿ ಚಿದಂಬರಂ ಅವರ ಪರ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ತೀವ್ರ ವಾದ ಮಂಡಿಸಿದ್ದರೂ, ಸಿಬಿಐ ವಾದವನ್ನು ಪರಿಗಣಿಸಿದ ನ್ಯಾಯಾಲಯ ಆಗಸ್ಟ್ 26ರವರೆಗೂ ಸಿಬಿಐ ವಶಕ್ಕೆ ಒಪ್ಪಿಸಿತ್ತು.
ಈ ಅವಧಿಯಲ್ಲಿ ಚಿದಂಬರಂ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದ್ದು, ಅದಕ್ಕೆ ಅವರು ಸಹಕಾರ ನೀಡುತ್ತಿಲ್ಲ. ಹೀಗಾಗಿ ಇನ್ನಷ್ಟು ದಿನ ಅವರನ್ನು ವಶಕ್ಕೆ ನೀಡುವಂತೆ ಸಿಬಿಐ ನ್ಯಾಯಾಲಯವನ್ನು ಕೋರಲಿದೆ.
ಸುಪ್ರೀಂಕೋರ್ಟ್ ಚಿದಂಬರಂ ಅವರ ಮೂರು ಅರ್ಜಿಗಳನ್ನು ಸೋಮವಾರ ವಿಚಾರಣೆಗೆ ಒಳಪಡಿಸಿತು. ಎರಡು ಅರ್ಜಿಗಳು ಸಿಬಿಐ ಕ್ರಮಗಳು ಹಾಗೂ ಒಂದು ಅರ್ಜಿ ಇ.ಡಿ. ನಡೆಸಿದ ದಾಳಿಗಳ ಕುರಿತಾಗಿದೆ. ಅದರಲ್ಲಿ ಸಿಬಿಐ ವಶದಲ್ಲಿ ಇರುವ ಅರ್ಜಿಯು ಸೋಮವಾರ ವಿಚಾರಣೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿರಲಿಲ್ಲ. ಬಳಿಕ ಅದನ್ನು ರಿಜಿಸ್ಟ್ರಾರ್ ಮೂಲಕ ಸೇರ್ಪಡೆ ಮಾಡಲಾಗಿತ್ತು.












Click it and Unblock the Notifications