ಇಂದು ಸಂಸತ್ತಿನಲ್ಲಿ ತ್ರಿವಳಿ ತಲಾಖ್ ವಿಧೇಯಕ ಮಂಡನೆ
ನವದೆಹಲಿ, ಜುಲೈ 25: ದಿಢೀರ್ ತ್ರಿವಳಿ ತಲಾಖ್ ನಿಷೇಧಿಸುವ ವಿವಾದಿತ ವಿಧೇಯಕವನ್ನು ಕೇಂದ್ರ ಸರ್ಕಾರ ಮತ್ತೆ ಸಂಸತ್ತಿನಲ್ಲಿ ಮಂಡಿಸಲು ಮುಂದಾಗಿದೆ.
ಮೂಲಗಳ ಪ್ರಕಾರ ಈ ಕಾಯ್ದೆಯನ್ನು ಇನ್ನು ಲೋಕಸಭೆಯಲ್ಲಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಂಡಿಸಲಿದ್ದಾರೆ.ಇದರೊಂದಿಗೆ ಸತತ ಮೂರನೇ ಬಾರಿಗೆ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಕಾಯ್ದೆ ವಿಧೇಯಕ ಮಂಡನೆಯಾದಂತಾಗಲಿದೆ.
ಈ ಹಿಂದೆ ಎರಡು ಬಾರಿ ಬಹುಮತ ಲಭ್ಯವಿರದ ಕಾರಣ ರಾಜ್ಯಸಭೆಯಲ್ಲಿ ವಿಧೇಯಕಕ್ಕೆ ಅಡ್ಡಿಯಾಗಿತ್ತು, ಪ್ರತಿಪಕ್ಷಗಳು ಇದನ್ನು ಸದನ ಸಮಿತಿ ವರ್ಗಾಯಿಸಿದ್ದರು. ರಾಜ್ಯ ಸಭೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲ ಬದಲಾವಣೆಗಳೊಂದಿಗೆ 2018ರ ಅಂತ್ಯದಲ್ಲಿ ಮರು ಮಂಡನೆ ಮಾಡಲಾಗಿತ್ತು.

ಆದರೆ ಸರ್ಕಾರದ ಅವಧಿ ಮುಗಿಯುವವರೆಗೆ ರಾಜ್ಯಸಭೆಯಿಂದ ಅನುಮತಿ ದೊರೆತಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ಮರು ಮಂಡನೆಗೆ ಸಿದ್ಧವಾಗಿದೆ.
ಈ ಬಾರಿಯೂ ಲೋಕಸಭೆಯಲ್ಲಿ ಅನಾಯಾಸವಾಗಿ ಈ ವಿಧೇಯಕಕ್ಕೆ ಅನುಮೋದನೆ ದೊರೆಯಲಿದ್ದು, ರಾಜ್ಯಸಭೆಗೆ ಅಗ್ನಿ ಪರೀಕ್ಷೆ ಎದುರಾಗಲಿದೆ.
ಎನ್‌ಡಿಎ ಭಾಗವಾಗಿರುವ ಜೆಡಿಯು ಕೂಡ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಈ ಬಾರಿಯೂ ವಿಧೇಯಕ ಅಂಗೀಕಾರಗೊಳ್ಳುವುದೂ ಕಷ್ಟಸಾಧ್ಯ ಎನ್ನಲಾಗುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಮತ್ತೆ ಸುಗ್ರೀವಾಜ್ಞೆ ಮೊರೆ ಹೋಗುವುದು ಅನಿವಾರ್ಯವಾಗಲಿದೆ.












Click it and Unblock the Notifications