ಕಿಡಿಗೇಡಿ ಪಾಕಿಸ್ತಾನಕ್ಕೆ ಅರುಣ್ ಜೇಟ್ಲಿ ಕಟ್ಟೆಚ್ಚರ
ಶ್ರೀನಗರ, ಅ.9: ಜಮ್ಮುಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘಿಸಿ ಗಡಿ ಭದ್ರತಾ ಪಡೆ ಮತ್ತು ನಾಗರಿಕರ ಮೇಲೆ ಪದೇ ಪದೇ ನಡೆಸುತ್ತಿರುವ ಪುಂಡಾಟಿಕೆಯನ್ನು ಪಾಕಿಸ್ತಾನ ತಕ್ಷಣವೇ ನಿಲ್ಲಿಸದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು ಎಚ್ಚರಿಸಿದ್ದಾರೆ.
ಭಾರತದ ಸಹನೆಯನ್ನು ನಮ್ಮ ದೌರ್ಬಲ್ಯ ಎಂದು ತಿಳಿದುಕೊಂಡರೆ ಅದು ನಿಮ್ಮ ತಪ್ಪು. ಪರಿಸ್ಥಿತಿ ಹೀಗೆ ಮುಂದುವರೆದರೆ ನಾವು ಕೈ ಕಟ್ಟಿ ಸುಮ್ಮನೆ ಕೂರುವುದಿಲ್ಲ. ಕೂಡಲೇ ಅಂತಾರಾಷ್ಟ್ರೀಯ ಗಡಿರೇಖೆ (ಎಲ್‍ಒಸಿ)ಬಳಿ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆಯನ್ನು ನಿಲ್ಲಿಸಿ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ, ಪಾಕ್ ತನ್ನ ತಪ್ಪನ್ನು ಒಪ್ಪಿಕೊಂಡು ಸುಮ್ಮನಿದ್ದರೆ ಒಳಿತು.ನಮ್ಮ ಸೇನೆಯನ್ನು ಪದೇ ಪದೇ ಕೆಣಕಿದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ. ಭಾರತ ಒಂದು ಜವಾಬ್ದಾರಿಯುತ ರಾಷ್ಟ್ರವಾಗಿದ್ದು, ಇಲ್ಲಿನ ನಾಗರಿಕರನ್ನು ರಕ್ಷಣೆ ಮಾಡುವುದು ನಮ್ಮ ಮೊದಲ ಕರ್ತವ್ಯವಾಗಿದೆ ಎಂದು ಎಚ್ಚರಿಕೆ ಕೊಟ್ಟರು.

ನೋಟಿಸ್ ಜಾರಿ: ಭಾರತದಲ್ಲಿರುವ ಪಾಕಿಸ್ತಾನದ ಹೈಕಮೀಷನರ್ ಗೆ ನೋಟಿಸ್ ನೀಡಲಾಗಿದ್ದು, ಕದನ ವಿರಾಮ ಉಲ್ಲಂಘನೆ ನಿಲ್ಲಿಸಬೇಕೆಂದು ತಾಕೀತು ಮಾಡಲಾಗಿದೆ. ಕಳೆದ 10 ದಿನಗಳ ಅವಧಿಯಲ್ಲಿ ಜಮ್ಮು ಕಾಶ್ಮೀರದ 192 ಕಿ.ಮೀ ಉದ್ದದ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಪಾಕಿಸ್ತಾನ ಪಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಮುಗ್ಧ ನಾಗರಿಕರನ್ನು ಹತ್ಯೆ ಮಾಡಿ ಹಲವಾರು ಮಂದಿ ಮೇಲೆ ಗುಂಡಿನ ದಾಳಿ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್, ಭೂ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರತಿ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ದೇಶ ಸನ್ನದ್ಧವಾಗಿದ್ದು ಸೇನೆಯನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ ಎಂದು ಜೇಟ್ಲಿ ಅವರು ಮಾಹಿತಿ ನೀಡಿದರು.
ಪಾಕಿಸ್ತಾನ ಪ್ರಚೋದಿತರ ಉಗ್ರರ ದಾಳಿಯಿಂದ ಕಣಿವೆ ರಾಜ್ಯದಲ್ಲಿ ಕಳೆದ ಕೆಲ ದಿನಗಳಲ್ಲಿ ಸುಮಾರು 70ಕ್ಕೂ ಅಧಿಕ ಜನ ಸಾವನ್ನಪ್ಪಿದ್ದರೆ, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಡಿಭಾಗದ ಹಳ್ಳಿಗಳಲ್ಲಿ ಜನ ಇನ್ನೂ ಆತಂಕದ ವಾತಾವರಣ ಎದುರಿಸುತ್ತಿದ್ದಾರೆ.












Click it and Unblock the Notifications