ಮುಂದಿನ 2 ದಿನಗಳವರೆಗೆ ಈ ರಾಜ್ಯಗಳಲ್ಲಿ ತೀವ್ರ ಶೀತ ಗಾಳಿ: IMD ಎಚ್ಚರಿಕೆ
ನವದೆಹಲಿ ಡಿಸೆಂಬರ್ 21: ದೆಹಲಿ, ಹರಿಯಾಣ ಮತ್ತು ರಾಜಸ್ಥಾನದಂತಹ ಹಲವಾರು ರಾಜ್ಯಗಳಲ್ಲಿ ಕಳೆದೆರಡು ದಿನಗಳಿಂದ ತಾಪಮಾನದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಕೆಲವು ರಾಜ್ಯಗಳಲ್ಲಿ ಈ ವಾರ ಸಂಪೂರ್ಣವಾಗಿ ತೀವ್ರ ಶೀತ ಗಾಳಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಭಾರತೀಯ ಹವಾಮಾನ ಇಲಾಖೆ (IMD) ಈ ವಾರದವರೆಗೆ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತೀವ್ರ ಶೀತ ಗಾಳಿ ಅಧಿಕವಾಗಿರುತ್ತದೆ ಎಂದು ಹೇಳಿದೆ. ದೆಹಲಿ, ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳು ಮುಂದಿನ ಎರಡು ದಿನಗಳ ಕಾಲ ಅತ್ಯಂತ ಚಳಿಯನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಕೋಲ್ಡ್ ವೇವ್ ಅಲರ್ಟ್ ನೀಡಲಾಗಿದ್ದರೂ ನಂತರ ತಾಪಮಾನ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಸಂಸ್ಥೆ ಹೇಳಿದೆ. ಜೊತೆಗೆ ಈ ವಾರ ಕೆಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಡಿಸೆಂಬರ್ 22 ಮತ್ತು 25 ರ ನಡುವೆ ಪಶ್ಚಿಮ ಹಿಮಾಲಯನ್ ಪ್ರದೇಶದಲ್ಲಿ ಹಗುರವಾದ ಮಧ್ಯಮ ಮಳೆ ಮತ್ತು ಹಿಮಪಾತವನ್ನು ನಿರೀಕ್ಷಿಸಲಾಗಿದೆ ಎಂದು IMD ಹೇಳಿದೆ. ಈ ವಾರ ಪಂಜಾಬ್‌ನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಆದರೆ ಡಿಸೆಂಬರ್ 24 ಮತ್ತು 25 ರಂದು ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ದಟ್ಟವಾದ ಮಂಜು ಆವರಿಸಲಿದೆ.

ಮುಂದಿನ 24 ಗಂಟೆಗಳಲ್ಲಿ ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ತೀವ್ರ ಶೀತ ಅಲೆಗಳು ಕಂಡುಬರುವ ಸಾಧ್ಯತೆಯಿದೆ. ಜೊತೆಗೆ ಉತ್ತರಾಖಂಡ, ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರದಂತಹ ರಾಜ್ಯಗಳಲ್ಲಿ ಮತ್ತು ಜಾರ್ಖಂಡ್ ನಲ್ಲಿ ಬುಧವಾರ ಮಧ್ಯಾಹ್ನದವರೆಗೆ ಅಧಿಕ ಶೀತ ಗಾಳಿಯ ಮುನ್ಸೂಚನೆ ನೀಡಲಾಗಿದೆ.
ಜಮ್ಮು, ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್, ಹಿಮಾಚಲ ಪ್ರದೇಶ, ಗಂಗಾನದಿ ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಮಧ್ಯಾಹ್ನದವರೆಗೆ ಇದೇ ರೀತಿಯ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಕನಿಷ್ಠ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೆ ಬಯಲು ಪ್ರದೇಶದಲ್ಲಿ IMD ಯಿಂದ ಶೀತ ಅಲೆಯನ್ನು ಘೋಷಿಸಲಾಗುತ್ತದೆ. ನಿನ್ನೆ, ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಪಾದರಸವು 3.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದರಿಂದ ದೆಹಲಿಯ ಕನಿಷ್ಠ ತಾಪಮಾನವು ಗಮನಾರ್ಹವಾಗಿ ಕುಸಿದಿದೆ.

ಮುಂದಿನ ಒಂದೆರಡು ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನವು ಮತ್ತಷ್ಟು ಇಳಿಯುವ ನಿರೀಕ್ಷೆಯಿದೆ. ಆದರೆ ವಾರದ ಅಂತ್ಯದ ವೇಳೆಗೆ ಶೀತದ ಅಲೆಯು ಕಡಿಮೆಯಾಗುವ ನಿರೀಕ್ಷೆಯಿದೆ. ಅಧಿಕ ಮಂಜು ಕವಿಯುವುದರಿಂದ ಉತ್ತರದ ಹಲವಾರು ರಾಜ್ಯಗಳಲ್ಲಿ ಗೋಚರತೆ ಕಡಿಮೆಯಾಗುವ ಸಾಧ್ಯತೆಯಿದೆ.
ಮುಂದಿನ ದಿನಗಳಲ್ಲಿ ದೆಹಲಿಯು ತಂಪಾದ ಹವಾಮಾನವನ್ನು ವೀಕ್ಷಿಸುವುದನ್ನು ಮುಂದುವರೆಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ, "ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಹಿಮಪಾತವು ಬಯಲು ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ" ಎಂದು ಹೇಳಿದೆ. "ವಾಯುವ್ಯ ಭಾರತದಲ್ಲಿ ದಿನದ ತಾಪಮಾನವು ಗಮನಾರ್ಹವಾಗಿ ಸಾಮಾನ್ಯ ದಿನಗಳಿಗಿಂತ ಕಡಿಮೆಯಾಗಿದೆ. ಈ ದಿನದ ತಾಪಮಾನವು ಡಿಸೆಂಬರ್ 21 ರವರೆಗೆ ಸಾಮಾನ್ಯ ದಿನಕ್ಕಿಂತ ಕಡಿಮೆ ಇರುತ್ತದೆ" ಎಂದು IMD ತಿಳಿಸಿದೆ.

ಮತ್ತೊಂದೆಡೆ, ಹವಾಮಾನ ಇಲಾಖೆಯು ಡಿಸೆಂಬರ್ 21 ರವರೆಗೆ ಉತ್ತರಾಖಂಡದ ಹಲವಾರು ಪ್ರದೇಶಗಳಲ್ಲಿ ಶೀತ ಅಲೆಗಳ ಬಗ್ಗೆ ಹಳದಿ ಎಚ್ಚರಿಕೆಯನ್ನು ನೀಡಿದೆ. IMD ಪ್ರಕಾರ, ಶುಕ್ರವಾರದಂದು ರಾಣಿಚೌರಿಯಲ್ಲಿ (-2.7 ° C) ಕಡಿಮೆ ತಾಪಮಾನ ದಾಖಲಾಗಿದೆ. ಮುಕ್ತೇಶ್ವರ್ (0.2°C), ಮಸ್ಸೂರಿ (0.9°C), ಪಿಥೋರಗಢ್ (0.9°C), ಮತ್ತು ನ್ಯೂ ತೆಹ್ರಿ (1.4°C) ದಾಖಲಾಗಿದೆ.












Click it and Unblock the Notifications