ಮೇಲಿನಿಂದ ಆದೇಶ ಬಂದಿದ್ದರೆ ಪೊಲೀಸರು ಏನು ಮಾಡಲು ಸಾಧ್ಯ?: ಕೇಜ್ರಿವಾಲ್
ನವದೆಹಲಿ, ಜನವರಿ 9: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಜ.5ರಂದು ನಡೆದ ಹಿಂಸಾಚಾರ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳದ ಕಾರಣಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿರುವ ದೆಹಲಿ ಪೊಲೀಸರನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಎನ್‌ಯುದಲ್ಲಿನ ಹಿಂಸಾಚಾರವನ್ನು ತಡೆಯುವಂತೆ ದೆಹಲಿ ಪೊಲೀಸರಿಗೆ 'ಮೇಲಿನಿಂದ' ಆದೇಶ ಬಂದಿರಲಿಲ್ಲ ಎಂದು ಹೇಳಿದರು.
'ದೆಹಲಿ ಪೊಲೀಸರು ಏನು ಮಾಡಲು ಸಾಧ್ಯ? ಹಿಂಸಾಚಾರ ತಡೆಯದಂತೆ ಅಥವಾ ಕಾನೂನು ಸುವ್ಯವಸ್ಥೆ ಕಾಪಾಡದಂತೆ ಅವರಿಗೆ ಆದೇಶ ಬಂದಿದ್ದರೆ ಪಾಪ, ದೆಹಲಿ ಪೊಲೀಸರು ಏನು ಮಾಡಲು ಸಾಧ್ಯ? ಅವರು ಈ ಆದೇಶಗಳನ್ನು ಪಾಲಿಸದೆ ಇದ್ದರೆ ಅವರನ್ನು ಅಮಾನತು ಮಾಡುತ್ತಾರೆ' ಎಂದರು.

'ನಾವು ಅಧಿಕಾರಕ್ಕೆ ಬಂದಾಗ ಆಗಿನ ಆಸ್ಪತ್ರೆಗಳು ಮತ್ತು ಶಾಲೆಗಳು ತೀರಾ ಶೋಚನೀಯ ಸ್ಥಿತಿಯಲ್ಲಿದ್ದವು. ನಾವು ವೈದ್ಯರು ಅಥವಾ ಶಿಕ್ಷಕರನ್ನು ಬದಲಿಸಲಿಲ್ಲ. ಏಕೆಂದರೆ ಅವರು ಬಹಳ ಸಮರ್ಥರಿದ್ದರು. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಿತ್ತು. ಯಾವಾಗ ಹಿಂಸಾಚಾರಗಳನ್ನು ತಡೆಯಬಾರದು ಎಂದು ಮೇಲಿನಿಂದ ಆದೇಶ ಬರುತ್ತದೆಯೋ ಆಗ ನೀವು ಅವರ ಆದೇಶಕ್ಕೆ ತಲೆಬಾಗಲೇಬೇಕಾಗುತ್ತದೆ' ಎಂದು ವ್ಯಂಗ್ಯವಾಗಿ ಹೇಳಿದರು.












Click it and Unblock the Notifications