ನಮ್ಮ ಮೆಟ್ರೋ ಇಂಧನ ಬಿಕ್ಕಟ್ಟು, ಟ್ರಾಫಿಕ್‌ಗೆ ಪರಿಹಾರ: 3 ನಿಮಿಷಕ್ಕೊಂದು ರೈಲು, 300 ಕಿಮೀ ಜಾಲ ವಿಸ್ತರಣೆ ಅಗತ್ಯ
ಬೆಂಗಳೂರು: ಇಂಧನ ಪೂರೈಕೆ ಮೇಲಿನ ಯುದ್ಧಗಳ ಪ್ರಭಾವ, ಬೆಲೆ ಏರಿಕೆ, ಅತೀವ ವಾಹನ ದಟ್ಟಣೆಗೆ ಬ್ರೇಕ್ ಹಾಕಲು ಬೆಂಗಳೂರಿನಂತಹ ಮಹಾನಗರದಲ್ಲಿ ಸಾಮೂಹಿಕ ಸಾರಿಗೆ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ಪರಿಸರ ಸ್ನೇಹಿ 'ನಮ್ಮ ಮೆಟ್ರೋ'ದ ಪಾತ್ರ ಮಹತ್ವವಾಗಿದೆ. ಇಂದಿನ ಸನ್ನಿವೇಶದಲ್ಲಿ 'ಹಳದಿ ಮೆಟ್ರೋ ಮಾರ್ಗ'ವು ಚಲನಶೀಲತೆಯ ಜೀವನಾಡಿ ಎಂಬುದು ಸಾಬಿತಾಗಿದೆ.
ಇಂಧನ ಬಿಕ್ಕಟ್ಟಿನ ಇಂದಿನ ಸನ್ನಿವೇಶ ಹಾಗೂ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಮೆಟ್ರೋ ನೀರ್ಣಾಯಕ ಪಾತ್ರ ವಹಿಸಲಿದೆ. ಈ ಕುರಿತಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಎಕ್ಸ್ ಪೊಸ್ಟ್‌ನಲ್ಲಿ ಮೆಟ್ರೋ ಜಾಲ ವಿಸ್ತರಣೆಗೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಂಧನ ಪೂರೈಕೆ ಸಮಸ್ಯೆ ನಡುವೆ ನಮ್ಮ ಮೆಟ್ರೋ ಹಳದಿ ಮಾರ್ಗವು ಚಲನಶೀಲತೆಯ ಜೀವನಾಡಿಯಾಗಿ ಸಾಬೀತಾಗಿದೆ. ವರ್ಕ್ ಫ್ರಂ ಹೋಮ್‌ಗೆ ಕರೆ ನೀಡಿದ ಬಳಿಕವು ಐಟಿ ಕಾರಿಡಾರ್ ಗೆ ತೆರಳುವ ಉದ್ಯೋಗಿಗಳ ಪ್ರಯಾಣವನ್ನು ಮರುರೂಪಿಸುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

3 ನಿಮಿಷಕ್ಕೊಂದು ರೈಲು, 300 ಕಿಮೀ ಮೆಟ್ರೋ ಜಾಲ
ಈ ಹಿಂದೆ ಉಪಮುಕ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಪ್ರಸ್ತಾಪ ಮಾಡಿದ್ದೆ. ಬೆಂಗಳೂರಿಗೆ 3 ನಿಮಿಷಗಳ ಆವರ್ತನದೊಂದಿಗೆ 300 ಕಿಮೀ ಮೆಟ್ರೋ ಜಾಲದ ಅಗತ್ಯವಿದೆ ಎಂದು ಚರ್ಚಿಸಿದ್ದೆ ಎಂದರು. ದಟ್ಟಣೆ ಹೆಚ್ಚಿರುವ ನಗರದಲ್ಲಿ ಹೊರ ವಲಯಕ್ಕೂ ಸಂಪರ್ಕಿಸುವ ಮೆಟ್ರೋ ಪರಿಸರ ಸ್ನೇಹಿ ಸಾರಿಗೆ ಆಗಿದೆ. ಇಂಧನ ಅವಲಂಬನೆ ತಪ್ಪಲಿದೆ. ಸಂಚಾರ ದಟ್ಟಣೆ ಇಳಿಕೆಗೆ ಪೂರಕವಾಗಿದೆ. ಹೀಗಾಗಿ ಜಾಲ ವಿಸ್ತರಣೆ, ಒಟ್ಟಾರೆ 300 ಕಿಮೀ ಮೆಟ್ರೋ ಜಾಲದ ಅಗತ್ಯತೆ ಕುರಿತು ಅವರು ಬೆಳಕು ಚೆಲ್ಲಿದ್ದಾರೆ.
BMLTAಗೆ ಅಧಿಕಾರ ನೀಡಲು ಸಂಸದ ಆಗ್ರಹ
ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಬಗ್ಗೆ ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದೆ ಆದರೆ ಕೂಡಲೇ ಬೆಂಗಳೂರು ನಗರ ಭೂಸಾರಿಗೆ ಪ್ರಾಧಿಕಾರಕ್ಕೆ (BMLTA) ಅಧಿಕಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಈ BMLTA ಸಂಸ್ಥೆಯು ಅಗತ್ಯ ಭೂಮಿ ಬಳಕೆಯೊಂದಿಗೆ ನಗರದಲ್ಲಿ ಸಾರ್ವಜನಿಕ ಸಾರಿಗೆ ಯೋಜನೆ ಸಾಕಾರಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಸುಗಮ ಸಂಚಾರ ನೀತಿಗಳನ್ನು ರೂಪಿಸಿತ್ತದೆ. ಇದಕ್ಕೆ ಅಧಿಕಾರ ನೀಡಿದಲ್ಲಿ ಮೆಟ್ರೋ ಜಾಲ ವಿಸ್ತರಣೆ, ಯೋಜನೆಗಳಿಗೆ ವೇಗ ಸಿಗುತ್ತದೆ ಎಂದು ಸಂಸದರ ಅಭಿಪ್ರಾಯಪಟ್ಟಿದ್ದಾರೆ.
ಮೆಟ್ರೋ ಜಾಲ ವಿಸ್ತರಣೆ ಏಕೆ ಅಗತ್ಯ? ಅನುಕೂಲ ಹೇಗೆ?
ಇಂಧನ ಬೆಲೆ ಏರಿಕೆ, ಪೂರೈಕೆ ಸಮಸ್ಯೆ ನಡುವೆ ಅದರ ಬಳಕೆ ಕಡಿಮೆ ಮಾಡಬೇಕು. ಕಂಪನಿಗಳು ತಮ್ಮ ನೌಕರರಿಗೆ ಆದಷ್ಟು ವರ್ಕ್ ಫ್ರಂ ಹೋಮ್ ಕೆಲಸ ನೀಡಬೇಕು ಎಂದು ಪ್ರಧಾನಮಂತ್ರಿಗಳೇ ಕರೆ ನೀಡಿದ್ದಾರೆ. ಹೀಗಿದ್ದರೂ ಕಚೇರಿಯಿಂದ ಕೆಲಸ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಬೆಂಗಳೂರು ಮೆಟ್ರೋ ಹಳದಿ ಮಾರ್ಗವು ಸಾಬೀತು ಮಾಡಿದೆ.
ನಮಗೆಲ್ಲ ತಿಳಿದಿರುವಂತೆ ನಮ್ಮ ಮೆಟ್ರೋ ವಿದ್ಯುತ್ ಚಾಲಿತವಾದದ್ದು. ಅದಕ್ಕೆ ಇಂಧನ ಅಗತ್ಯವಿಲ್ಲ. ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗಿನ ಹಳದಿ ಮಾರ್ಗವು ನಗರದ ಹೊರಗಿನ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಐಟಿ ಕಂಪನಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಸಾವಿರಾರು ಮಂದಿ ನೌಕರರು ಮೆಟ್ರೋ ಬಳಸಿ ಕಚೇರಿಗೆ ತೆರಳುತ್ತಿದ್ದಾರೆ.

ಮೆಟ್ರೋ ಜಾಲ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಲಿ
ಇಂಧನ ಬಿಕ್ಕಟ್ಟಿನ ಇಂದಿನ ಪರಿಸ್ಥಿತಿಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ವಾಹನಗಳು, ಟ್ರಾಫಿಕ್ ದಟ್ಟವಾಗಿರುವ ಬೆಂಗಳೂರಿನಂತಹ ನಗರದಲ್ಲಿ ಮೆಟ್ರೋ ಜಾಲ ವಿಸ್ತರಣೆ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ಮೆಟ್ರೋ ಬಳಕೆಯಿಂದ ಇಂಧನ ಮೇಲಿನ ಅವಲಂಬನೆ ಮಾತ್ರವೇ ಕಡಿಮೆ ಆಗದೇ, ಟ್ರಾಫಿಕ್ ಇಳಿಕೆಗೂ ಸಹಾಯವಾಗುತ್ತದೆ. ಸದ್ಯ ಜನರಿಗೆ 96 ಕಿಮೀ ಮೆಟ್ರೋ ಜಾಲದಲ್ಲಿ ಓಡಾಡುತ್ತಿದ್ದಾರೆ. 300 ಜಾಲ ಇದ್ದಿದ್ದರೆ ಜನರ ಸಾರ್ವಜನಿಕ ಬಳಕೆಯು ಅಷ್ಟೇ ಆಗಿರುತ್ತಿತ್ತು. ಇದರಿಂದ ದಟ್ಟಣೆ ತಗ್ಗುತ್ತಿತ್ತು. ಈ ನಿಟ್ಟಿನಲ್ಲಿ ಸರ್ಕಾರ, ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಗಂಭೀರವಾಗಿ ಚಿಂತಿಸಬೇಕಿದೆ.
WFH ಗೆ ಎಲ್ಲ ಕಂಪನಿಗಳು ಒಪ್ಪುತ್ತವಾ?
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹಾಗೂ ವೈಟ್‌ಫಿಲ್ಡ್ ನಲ್ಲಿರುವ ಐಟಿ ಕಂಪನಿಗಳೆಲ್ಲವು ಹೈಬ್ರಿಡ್ ಮಾದರಿ ಕೆಲಸ ಅನುಸರಿಸಿಲ್ಲ. ಕೆಲವು ಕಂಪನಿಗಳು ತಮ್ಮ ಕೆಲಸಗಳ ಅಗತ್ಯತೆ ಆಧಾರದಲ್ಲಿ ಕಚೇರಿಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಹೀಗಾಗಿ ನಿತ್ಯ ನೌಕರರು ಕಚೇರಿಗೆ ಆಗಮಿಸಬೇಕಿದೆ. ಇನ್ನೂ ಕೆಲವು ಕಂಪನಿಗಳು ವಾರದಲ್ಲಿ 3 ದಿನ ಮಾತ್ರವೇ ಕಚೇರಿಗೆ ಬರಲು ಸೂಚಿಸಿವೆ. ಅಂದಾಜಿನ ಪ್ರಕಾರ ಶೇ. 90 ಸಂಪೂರ್ಣ ಮನೆಯಿಂದ ಕೆಲಸ (WFH) ಪದ್ಧತಿಗೆ ಬ್ರೇಕ್ ಬಿದ್ದಿದೆ. ಇಂಧನ ಬಿಕ್ಕಟ್ಟಿನ ಇಂದಿನ ಸನ್ನಿವೇಶದಲ್ಲಿ ಮತ್ತೆ ಮನೆಯಿಂದ ಕೆಲಸಕ್ಕೆ ಅನುಮತಿ ನೀಡುವಂತೆ ಕರೆ ನೀಡಲಾಗಿದೆ. ಆದರೆ ಎಲ್ಲ ಕಂಪನಿಗಳನ್ನು ಇದನ್ನು ಒಪ್ಪುವುದು ಅನುಮಾನ ಎನ್ನಲಾಗಿದೆ.
ಕಚೇರಿಯಿಂದ ಕೆಲಸದಲ್ಲಿ ಕಾರ್ಯಕ್ಷಮತೆ ಹೆಚ್ಚು
ಕಚೇರಿಯಿಂದ ಕೆಲಸ ಮಾಡಿದಲ್ಲಿ ಶೇ.100ರಷ್ಟು ಕಾರ್ಯಕ್ಷಮತೆ ಸಾಧ್ಯವಾಗುತ್ತದೆ. ಅನೇಕ ಕಂಪನಿಗಳು ಇದನ್ನು ನಂಬುತ್ತವೆ. ಐಟಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿರುವ ಕಂಪನಿಗಳಿಗೆ ನೌಕರರು ಇಂಧನ ಚಾಲಿತ ಸಾರಿಗೆ ಬಳಸುತ್ತಿದ್ದಾರೆ. ಅದು ಸಂಪೂರ್ಣವಾಗಿ ಕಡಿಮೆ ಆಗಲು ನಗರದಲ್ಲಿ ಮೆಟ್ರೊ ಜಾಲ ವಿಸ್ತರಣೆ ಆಗಬೇಕಾದ ತುರ್ತು ಅನಿವಾರ್ಯತೆ ಇದೆ. ಇದು ಇಂಧನ ಬಿಕ್ಕಟ್ಟು, ಇಂಧನ ಮೇಲಿನ ಅವಲಂಬನೆ, ಸಂಚಾರ ದಟ್ಟಣೆಗೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಪರಿಸರ ಸ್ನೇಹಿ ಸಾರಿಗೆಯು ಉದ್ಯಾನ ನಗರಿ ಬೆಂಗಳೂರಿಗೆ ಅತ್ಯವಶ್ಯಕವಾಗಿದೆ.
ನೀಲಿ, ಗುಲಾಬಿ ಮೆಟ್ರೋ ಮಾರ್ಗಗಳನ್ನು ತುರ್ತಾಗಿ ಲೋಕಾರ್ಪಣೆ ಮಾಡುವುದರ ಜೊತೆಗೆ ವಿಳಂಬವಿಲ್ಲದೇ ಹೊಸ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂಬ ಒತ್ತಾಯ ಪ್ರಯಾಣಿಕರಿಂದ ಕೇಳಿ ಬರುತ್ತಿದೆ.














Click it and Unblock the Notifications