ನಕ್ಸಲನಾಗಿದ್ದೆ, ಮತ್ತೆ ನಕ್ಸಲನ್ನಾಗಿ ಮಾಡಬೇಡಿ: ನಿತಿನ್ ಗಡ್ಕರಿ
ನವದೆಹಲಿ, ಅಕ್ಟೋಬರ್ 03: ಕೇಂದ್ರದ ಪ್ರಭಾವಿ ಸಚಿವರೊಬ್ಬರು ತಾವು ಹಿಂದೆ ನಕ್ಸಲರಾಗಿದ್ದುದಾಗಿ ಹೇಳಿದ್ದಾರೆ.
'ಮೊದಲು ನಕ್ಸಲನಾಗಿದ್ದ ನಂತರ ಆರ್‌ಎಸ್‌ಎಸ್ ಸೇರಿದೆ, ಈಗ ಮತ್ತೆ ನಕ್ಸಲನನ್ನಾಗಿ ಮಾಡಬೇಡಿ' ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಅಧಿಕಾರಿಗಳಿಗೆ ಹೇಳಿರುವುದಾಗಿ ವರದಿ ಆಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇತ್ತೀಚೆಗೆ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನಿರ್ಲಕ್ಷ್ಯದ ಬಗ್ಗೆ ಹೇಳಿದ್ದಾರೆ.

ಇದರಿಂದ ಕುಪಿತಗೊಂಡ ನಿತಿನ್ ಗಡ್ಕರಿ ವಿಜಯನ್ ಅವರ ಎದುರೇ ತಮ್ಮ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, 'ಮೊದಲು ನಕ್ಸಲ್ ಆಗಿದ್ದೆ, ನಂತರ ಆರ್‌ಎಸ್‌ಎಸ್ ಸೇರಿದೆ, ನಿಮ್ಮನ್ನು ಸರಿದಾರಿಗೆ ತರಲು ನನ್ನನ್ನು ಮತ್ತೆ ನಕ್ಸಲ್ ಆಗುವಂತೆ ಮಾಡಬೇಡಿ' ಎಂದು ಎಚ್ಚರಿಸಿದ್ದಾರೆ.
'ಯಾರು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ, ಇಲ್ಲಿ ನಾನೇ ಬಾಸ್, ಇದು ಐದನೇ ಬಾರಿ ಒಂದೇ ವಿಷಯವಾಗಿ ಕೇರಳ ಸಿಎಂ ನನ್ನನ್ನು ಭೇಟಿ ಆಗುತ್ತಿದ್ದಾರೆ, ನನಗೇ ನಾಚಿಕೆ ಆಗುತ್ತಿದೆ' ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಕೆಲವೇ ಗಂಟೆಗಳ ಒಳಗಾಗಿ ಕೇರಳ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಕಡತಗಳು ಇತ್ಯರ್ಥಗೊಳ್ಳಬೇಕು ಎಂದು ನಿತಿನ್ ಗಡ್ಕರಿ ಅವರು ಖಡಕ್ ಆದೇಶವನ್ನು ಅಧಿಕಾರಿಗಳಿಗೆ ನೀಡಿದ್ದಾರೆ.
ಕೇರಳ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದವು ಇದರ ಬಗ್ಗೆ ಕೆಲವು ದಿನಗಳ ಹಿಂದಷ್ಟೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಆರ್‌ಎಸ್‌ಎಸ್ ಅನ್ನು ದೂಷಿಸಿದ್ದರು.












Click it and Unblock the Notifications